ತಾಲಿಬಾನ್ ಅಧಿಕಾರಿಗಳ ಜತೆ ಜಪಾನ್ ರಾಯಭಾರಿ ಸಭೆ

Update: 2021-11-25 18:28 GMT

ಟೋಕಿಯೊ, ನ.25: ಅಫ್ಘಾನಿಸ್ತಾನಕ್ಕೆ ಜಪಾನ್‌ನ ರಾಯಭಾರಿ ಒಕಾಡ ತಕಶಿ ನವೆಂಬರ್‌ನಲ್ಲಿ ತಾಲಿಬಾನ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂದು ಜಪಾನ್‌ನ ವಿದೇಶ ವ್ಯವಹಾರ ಇಲಾಖೆ ಗುರುವಾರ ಹೇಳಿದೆ.

ತಕಶಿ ನವೆಂಬರ್ 21ರಿಂದ 24ರವರೆಗೆ ಕಾಬೂಲ್‌ನಲ್ಲಿದ್ದರು. ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು ಮತ್ತು ಅಫ್ಘಾನಿಸ್ತಾನದಲ್ಲಿರುವ ಹಾಲಿ ಪರಿಸ್ಥಿತಿಯ ಬಗ್ಗೆ ಅವರು ವರದಿ ನೀಡಿದ್ದಾರೆ . ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸಹಿತ ತಾಲಿಬಾನ್‌ನ ಹಿರಿಯ ಸದಸ್ಯರನ್ನು ಭೇಟಿಯಾದ ಒಕಾಡ ತಕಶಿ, ಅಫ್ಘಾನ್‌ನಲ್ಲಿರುವ ಜಪಾನ್ ಪ್ರಜೆಗಳು ಹಾಗೂ ರಾಯಭಾರ ಕಚೇರಿಯ ಸ್ಥಳೀಯ ಸಿಬಂದಿಗಳ ಸುರಕ್ಷತೆಯನ್ನು ಖಾತರಿಪಡಿಸುವಂತೆ ಆಗ್ರಹಿಸಿದರು. ಅಲ್ಲದೆ ದೇಶದಿಂದ ಹೊರಹೋಗಲು ಇಚ್ಛಿಸುವವರ ಸುರಕ್ಷಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು . ಅಫ್ಘಾನ್‌ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಸುಧಾರಣೆಗೆ ನೆರವಾಗಲು ಅಂತರಾಷ್ಟ್ರೀಯ ಸಂಘಟನೆಗಳ ಮೂಲಕ ಜಪಾನ್ ನೆರವು ನೀಡುವ ಬಗ್ಗೆ ಅವರು ಆಶ್ವಾಸನೆ ನೀಡಿದರು ಎಂದು ಇಲಾಖೆ ಹೇಳಿದೆ. ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿಯನ್ನೂ ಒಕಾಡ ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಇಲಾಖೆ ಹೇಳಿದೆ.

ಮಹಿಳೆಯರು, ಮಕ್ಕಳ ಸಹಿತ ಎಲ್ಲಾ ಜನತೆಯ ಹಕ್ಕುಗಳನ್ನು ಗೌರವಿಸುವುದು, ಎಲ್ಲರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆ ರೂಪಿಸುವುದು, ಅಫ್ಘಾನ್ ನೆಲ ಉಗ್ರರ ಸ್ವರ್ಗವಾಗಲು ಆಸ್ಪದ ನೀಡಬಾರದು ಎಂಬ ಅಂತರಾಷ್ಟ್ರೀಯ ಸಮುದಾಯದ ಆಗ್ರಹವನ್ನು ಪುನರುಚ್ಚರಿಸಿದ ಒಕಾಡ ತಕಶಿ, ಈ ನಿಟ್ಟಿನಲ್ಲಿ ರಚನಾತ್ಮಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ಎಂದು ಇಲಾಖೆ ಹೇಳಿದೆ.

ಮಾನವೀಯ ನೆರವು ಒದಗಿಸುವ ಕಾರ್ಯಕರ್ತರ ಸುರಕ್ಷತೆಯನ್ನು ಖಾತರಿಪಡಿಸುವುದಾಗಿ ತಾಲಿಬಾನ್ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News