ಇರಾಕ್: ಉಮಯ್ಯ ಯುಗದ ಮಣ್ಣಿನ ಮಸೀದಿ ಪತ್ತೆ

Update: 2021-11-26 17:52 GMT

ಬಗ್ದಾದ್, ನ.26: ಇರಾಕ್‌ನ ದಕ್ಷಿಣ ಭಾಗದ ಧಿ ಖಾರ್ ಗವರ್ನರ್ ಪ್ರಾಂತದಲ್ಲಿ ಹಿಜಿರ ಶಕದ 60ನೇ ವರ್ಷಕ್ಕೆ ಸೇರಿದ ಮಣ್ಣಿನ ಮಸೀದಿಯನ್ನು ಬ್ರಿಟನ್‌ನ ಮ್ಯೂಸಿಯಂ ಉತ್ಖನನ ತಂಡವು ಸ್ಥಳೀಯ ಇರಾಕಿ ತಂಡದ ನೆರವಿನಿಂದ ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್-ರಫಾಯಿ ನಗರದ ಮಧ್ಯಭಾಗದಲ್ಲಿ ಸುಮಾರು 16 ಅಡಿ ಎತ್ತರ, 26 ಅಡಿ ಅಗಲದ    ಈ ಮಸೀದಿ ಪತ್ತೆಯಾಗಿದೆ. ಮಸೀದಿಯ ಮಧ್ಯಭಾಗದಲ್ಲಿ ಸಣ್ಣ ಪ್ರಾರ್ಥನಾ ಕೊಠಡಿಯಿದ್ದು ಇದರಲ್ಲಿ 25 ಮಂದಿಗೆ ಸ್ಥಳಾವಕಾಶವಿದೆ ಎಂದು ಉತ್ಖನನ ತಂಡ ಹೇಳಿದೆ. ಇಸ್ಲಾಮ್‌ನ ಆರಂಭಿಕ ವರ್ಷಗಳಿಗೆ ಸಂಬಂಧಿಸಿದ, ಸಂಪೂರ್ಣ ಮಣ್ಣಿನಿಂದ ನಿರ್ಮಿಸಿರುವ ಈ ಮಸೀದಿಯ ಉತ್ಖನನ ಅತ್ಯಂತ ಮಹತ್ವದ ಮತ್ತು ಮಹೋನ್ನತ ಅನ್ವೇಷಣೆಯಾಗಿದೆ ಎಂದು ಗವರ್ನರ್ ಪ್ರಾಂತದ ಪರಿಶೋಧನೆ ಮತ್ತು ಉತ್ಖನನ ಇಲಾಖೆಯ ಮುಖ್ಯಸ್ಥ ಅಲಿ ಶಲ್ಘಾಮ್ ಹೇಳಿದ್ದಾರೆ.

ಈ ಪ್ರಾಂತದಲ್ಲಿ ಉಮಯ್ಯ ಯುಗಕ್ಕೆ ಸಂಬಂಧಿಸಿದ ಹಲವು ಪುರಾತತ್ವಶಾಸ್ತ್ರದ  ಧಾರ್ಮಿಕ ಕೇಂದ್ರಗಳನ್ನು ಅನ್ವೇಷಿಸಲಾಗಿದೆ. ಆದರೆ ಸವಕಳಿಯಿಂದಾಗಿ, ಇಸ್ಲಾಮಿನ ಈ ಯುಗಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿಲ್ಲ. ಮಣ್ಣಿನ ಮಸೀದಿಯು ಭೂಮಿಯ ಮೇಲ್ಪದರದಲ್ಲೇ ಪತ್ತೆಯಾಗಿರುವುದರಿಂದ ಮಸೀದಿ ಕಟ್ಟಡದ ಹೆಚ್ಚಿನ ಭಾಗಗಳು ನೀರು, ಗಾಳಿ ಮತ್ತು ಮಳೆಯಿಂದಾಗಿ ಸವೆದು ಹೋಗಿರಬಹುದು ಎಂದವರು ಹೇಳಿದ್ದಾರೆ.

ಪ್ರಾಚೀನಯುಗದ ಮೆಸೊಪೊಟೇಮಿಯಾದಲ್ಲಿ ಸುಮೇರಿಯನ್ ಸಮುದಾಯದವರು ವಾಸಿಸುತ್ತಿದ್ದ ಉರ್ ಎಂಬ ಪ್ರದೇಶ ಸಹಿತ ಧಿ ಖಾರ್ ಪ್ರಾಂತದಲ್ಲಿ ಹಲವು ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರದೇಶಗಳು ಬೆಳಕಿಗೆ ಬಂದಿದೆ. ಕಳೆದ ವರ್ಷ ಪೋಪ್ ಫ್ರಾನ್ಸಿಸ್ ಅವರೂ ಉರ್ ನಗರವನ್ನು ಸಂದರ್ಶಿಸಿದ್ದರು.

ಇದೇ ಪ್ರಾಂತದ ಲಾರ್ಸಾ ಎಂಬಲ್ಲಿ ಸಿನ್-ಇದ್ನಾಮ್ ದೊರೆಯ ಅರಮನೆಯನ್ನು ಫ್ರಾನ್ಸ್‌ನ ಉತ್ಖನನ ತಂಡದವರು ಅನ್ವೇಷಿಸಿದ್ದರು. ಇದೇ ಸ್ಥಳದಲ್ಲಿ ಸುಮಾರು 4,000 ವರ್ಷಗಳಷ್ಟು ಪುರಾತನ ಸಮುದಾಯದ ಕುರಿತ ಕುರುಹುಗಳನ್ನು ರಶ್ಯ-ಇರಾಕ್ ಜಂಟಿ ತಂಡದವರು ಅನ್ವೇಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News