ಲಿಬಿಯಾ: ನ್ಯಾಯಾಲಯದ ಮೇಲೆ ಬಂದೂಕುಧಾರಿಗಳ ದಾಳಿ

Update: 2021-11-26 18:31 GMT
ಸಾಂದರ್ಭಿಕ ಚಿತ್ರ:PTI

ಟ್ರಿಪೋಲಿ, ನ.26: ಲಿಬಿಯಾದ ಮಾಜಿ ಅಧ್ಯಕ್ಷ ಮೌಮರ್ ಗದ್ದಾಫಿಯ ಪುತ್ರನನ್ನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯದ ಮೇಲೆ ಬಂದೂಕುಧಾರಿಗಳ ತಂಡ ದಾಳಿ ನಡೆಸಿದ್ದು ಈ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಇದು ಕಾನೂನು ವಿರೋಧಿಗಳು ನಡೆಸಿದ ವಿಕೃತ ಕೃತ್ಯವಾಗಿದೆ ಎಂದು ಲಿಬಿಯಾದ ಸರಕಾರ ಖಂಡಿಸಿದೆ. ಈ ಘಟನೆಯ ಬಳಿಕ ಲಿಬಿಯಾದ ದಕ್ಷಿಣದಲ್ಲಿರುವ ಸೆಭಾ ನಗರದ ನ್ಯಾಯಾಲಯದ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ತನ್ನ ಕಕ್ಷೀದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಹಾಜರಾಗದಂತೆ ಸಶಸ್ತ್ರಧಾರಿಗಳ ತಂಡ ತಮ್ಮನ್ನು ತಡೆದಿದೆ ಎಂದು ಮೌಮರ್ ಗದ್ದಾಫಿ ಪುತ್ರ ಸೈಫ್ ಗದ್ದಾಫಿಯ ವಕೀಲರು ಹೇಳಿದ್ದಾರೆ. ಸೆಭಾ ನ್ಯಾಯಾಲಯಕ್ಕೆ ನುಗ್ಗಿದ ಬಂದೂಕುಧಾರಿಗಳ ತಂಡ ಅಲ್ಲಿ ದಾಂಧಲೆ ನಡೆಸಿದ್ದು ತಮ್ಮನ್ನು ಒಳಹೋಗದಂತೆ ತಡೆದಿದೆ. ಬಳಿಕ ಬಂದೂಕನ್ನು ಗುರಿಹಿಡಿದು ನ್ಯಾಯಾಲಯದ ಸಿಬ್ಬಂದಿಗಳನ್ನು ಬೆದರಿಸಿ ಹೊರಗೆ ಕಳುಹಿಸಿದೆ. ಈ ಮೂಲಕ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಮಾಡಿದೆ ಎಂದು ಅವರು ವೀಡಿಯೋ ಹೇಳಿಕೆ ನೀಡಿದ್ದಾರೆ.

ಈ ಘಟನೆಗೆ ಲಿಬಿಯಾದಲ್ಲಿನ ವಿಶ್ವಸಂಸ್ಥೆ ಬೆಂಬಲಿತ ನಿಯೋಗ ತೀವ್ರ ಕಳವಳ ವ್ಯಕ್ತಪಡಿಸಿದ್ದು ಲಿಬಿಯಾದಲ್ಲಿ ನಡೆಯುವ ಚುನಾವಣೆಯ ಪ್ರಕ್ರಿಯೆ ಮುಂದುವರಿಯಲು ಸೂಕ್ತ ಭದ್ರತೆ ಖಾತರಿಪಡಿಸುವಂತೆ ಸರಕಾರವನ್ನು ಆಗ್ರಹಿಸಿದೆ. ಡಿಸೆಂಬರ್ 24ಕ್ಕೆ ನಿಗದಿಯಾಗಿರುವ ಚುನಾವಣೆ ಮುಕ್ತ, ಎಲ್ಲರನ್ನೂ ಒಳಗೊಂಡ ರೀತಿಯಲ್ಲಿ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಯಬೇಕೆಂಬ ಕರೆಯನ್ನು ಪುನರುಚ್ಚರಿಸುವುದಾಗಿ ಹೇಳಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು 98 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಗದಾಫಿ ಸಹಿತ 25 ಮಂದಿಯನ್ನು ಅನರ್ಹಗೊಳಿಸಲಾಗಿದೆ. ಗದ್ದಾಫಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಮೇದುವಾರಿಕೆ ತಿರಸ್ಕೃತಗೊಂಡ ಅಭ್ಯರ್ಥಿಗಳು ಇದನ್ನು ಪ್ರಶ್ನಿಸಿ 48 ಗಂಟೆಯೊಳಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News