ಒಮಿಕ್ರಾನ್ ಗಂಭೀರ ರೋಗಲಕ್ಷಣಗಳನ್ನು ಉಂಟು ಮಾಡದು: ದಕ್ಷಿಣ ಆಫ್ರಿಕ ವೈದ್ಯಕೀಯ ಅಸೋಸಿಯೇಶನ್ ಹೇಳಿಕೆ

Update: 2021-11-28 17:41 GMT

ಜೊಹಾನ್ಸ್‌ಬರ್ಗ್, ನ.27: ತ್ವರಿತವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆಯೆನ್ನಲಾದ ಕೊರೋನ ವೈರಸ್‌ನ ರೂಪಾಂತರಿ ಪ್ರಭೇದ ಒಮಿಕ್ರಾನ್ ಸೋಂಕಿತರಿಗೆ ಸೌಮ್ಯ ಸ್ವರೂಪದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ, ಆದರೆ ಅದರಿಂದ ಯಾವುದೇ ತೀವ್ರ ಸ್ವರೂಪದ ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲವೆಂದು ದಕ್ಷಿಣ ಆಫ್ರಿಕದ ವೈದ್ಯಕೀಯ ಅಸೋಸಿಯೇಶನ್‌ನ ಅಧ್ಯಕ್ಷ ಆ್ಯಂಜೆಲಿಕ್ ಕೊಯೆಟ್ಜ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಒಮಿಕ್ರಾನ್ ವೈರಸ್ ಆತಂಕಕಾರಿಯೆಂದು ವಿಶ್ವ ಆ ರೋಗ್ಯ ಸಂಸ್ಥೆಯು ಗುರುತಿಸಿದೆ. ಒಮಿಕ್ರಾನ್ ಗರಿಷ್ಠ 32 ರೂಪಾಂತರಗಳನ್ನು ಹೊಂದುವ ಸಾಮರ್ಥ್ಯವಿದೆಯಾದ್ದರಿಂದ ಅದು ಅತ್ಯಂತ ವೇಗವಾಗಿ ಹರಡಬಲ್ಲದು ಮತ್ತು ಅಪಾಯಕಾರಿಯೆಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ. ಗ್ರೀಕ್ ಅಕ್ಷರಮಾಲೆಯ 15ನೇ ಪದವಾದ ಒಮಿಕ್ರಾನ್‌ನ ಹೆಸರನ್ನು ಈ ವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಇರಿಸಿದೆ.

ಒಮಿಕ್ರಾನ್ ಒಂದು ಅಥವಾ ಎರಡು ದಿನಗಳವರೆಗೆ ಭುಜದ ಸ್ನಾಯುಗಳು ನೋಯುವುದು ಹಾಗೂ ಬಳಲಿಕೆಯಂತಹ ಅಸ್ವಸ್ಥತೆಯ ಲಕ್ಷಣಗಳನ್ನುಂಟು ಮಾಡುತ್ತದೆ. ಆದರೆ ಈ ವೈರಸ್‌ನ ಸೋಂಕು ತಗಲಿದವರಲ್ಲಿ     ರುಚಿ ಹಾಗೂ ವಾಸನೆಯನ್ನು ಗ್ರಹಿಸುವ ಶಕ್ತಿ ನಷ್ಟವಾಗುವುದು ಕಂಡುಬಂದಿಲ್ಲ. ಅವರು ಲಘುವಾದ ಕಫದಿಂದ ಬಾಧಿತರಾಗಬಹುದಾಗಿದೆ. ಒಮಿಕ್ರಾನ್ ವೈರಸ್ ಸೋಂಕಿಗೊಳಗಾದವರಲ್ಲಿ ಹೆಚ್ಚಿನವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೊಯೆಟ್ಝ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಒಮಿಕ್ರಾನ್ ರೋಗಿಗಳಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಸಮಸ್ಯೆಯುಂಟಾಗಿಲ ಮತ್ತು ಈಗಾಗಲೇ ಲಸಿಕೆಯನ್ನು ಪಡೆದಿರುವವರಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ. ಆದರೆ ಲಸಿಕೆಯನ್ನು ಪಡೆದಿರದವರಿಗೆ ಪರಿಸ್ಥಿತಿಯು ವಿಭಿನ್ನವಾಗಿರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News