ಒಮಿಕ್ರಾನ್: ಜಗತ್ತಿನಾದ್ಯಂತ ಕಟ್ಟೆಚ್ಚರ; ಆಫ್ರಿಕ ಖಂಡದ ಹತ್ತು ರಾಷ್ಟ್ರಗಳಿಗೆ ವಿಮಾನಯಾನ ಸ್ಥಗಿತ

Update: 2021-11-28 18:40 GMT

ಲಂಡನ್, ನ.28: ಅತ್ಯಂತ ತ್ವರಿತವಾಗಿ ಹರಡಬಲ್ಲ ಒಮಿಕ್ರಾನ್ ಪ್ರಭೇದದ ಕೊರೋನ ವೈರಸ್ ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾದ ಕೆಲವೇ ದಿನಗಳಲ್ಲಿ ಯುರೋಪ್‌ನ ಕೆಲವು ದೇಶಗಳಲ್ಲಿಯೂ ಕಾಣಿಸಿಕೊಂಡಿರುವುದರಿಂದ,ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಅನೇಕ ದೇಶಗಳು ಈ ಸೋಂಕಿನ ಹಾವಳಿಯನ್ನು ತಡೆಯಲ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿವೆ..

ಒಮಿಕ್ರಾನ್ ವೈರಸ್‌ನ ಎರಡು ಪ್ರಕರಣಗಳು ದೇಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಿಟನ್ ಶನಿವಾರ ಮಾಸ್ಕ್ ಧಾರಣೆ ಕುರಿತ ನಿಯಮಗಳನ್ನು ಬಿಗಿಗೊಳಿಸಿದೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಯನ್ನು ಬಿಗಿಗೊಳಿಸಿದೆ. ಯುರೋಪ್‌ನ ಇತರ ರಾಷ್ಟ್ರಗಳಾದ ಜರ್ಮನಿ ಹಾಗೂ ಇಟಲಿಯಲ್ಲಿಯೂ ಸೋಂಕಿನ ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಲ್ಜಿಯಂ, ಇಸ್ರೇಲ್ ಹಾಗೂ ಹಾಂಕಾಂಗ್‌ನಲ್ಲಿಯೂ ಒಮಿಕ್ರಾನ್ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಒಮಿಕ್ರಾನ್ ವೈರಸ್ ಈಗಾಗಲೇ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದರೆ ತನಗೇನೂ ಅಚ್ಚರಿಯಾಗದೆಂದು ಅಮೆರಿಕದ ಸೋಂಕು ರೋಗಗಳ ತಜ್ಡ ಡಾ. ಆ್ಯಂಟನಿ ಫೌಸಿ ಅವರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ 50 ಲಕ್ಷಕ್ಕೂ ಅಧಿಕ ಮಂದಿಯನ್ನ ಬಲಿತೆಗೆದುಕೊಂಡಿರುವ ಕೊರೋನ ವೈರಸ್ ಸೋಂಕಿನ ಹಾವಳಿ ಆರಂಭಗೊಂಡು ಎರಡು ವರ್ಷಗಳ ಬಳಿಕ ಕಾಣಿಸಿಕೊಂಡಿರುವ ರೂಪಾಂತರಿ ಒಮಿಕ್ರಾನ್ ವೈರಸ್‌ನ ಹರಡುವಿಕೆಯನ್ನು ತಡೆಯಲು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ. ಹಲವಾರು ದೇಶಗಳು ಯುನಿಕ್ರಾನ್ ವೈರಸ್‌ನ ಉಗಮಸ್ಥಾನವಾದ ದಕ್ಷಿಣ ಆಫ್ರಿಕದ ವಿಮಾನಗಳಿಗೆ ನಿಷೇಧವನ್ನು ಹೇರಿವೆ.

ಬ್ರಿಟನ್ ಮಾತ್ರವಲ್ಲದೆ ಆಸ್ಟ್ರೇಲಿಯ, ಬ್ರೆಝಿಲ್, ಕೆನಡ, ಯುರೋಪ್ ಒಕ್ಕೂಟ, ಇರಾನ್,ಜಪಾನ್, ನ್ಯೂಝಿಲ್ಯಾಂಡ್, ಥೈಲ್ಯಾಂಡ್ ಹಾಗೂ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಆಫ್ರಿಕ ಖಂಡದ ರಾಷ್ಟ್ರಗಳಾದ ಆಂಗೊಲಾ, ಮಾಲಾವಿ, ಮೊಝಾಂಬಿಕ್ ಹಾಗೂ ಝಾಂಬಿಯಾಗಳಿಗೆ ರವಿವಾರದಿಂದ ವಿಮಾನ ಹಾರಾಟವನ್ನು ನಿಷೇಧಿಸಿದೆ. ಒಮಿಕ್ರಾನ್ ವೈರಸ್ ವ್ಯಾಪಕವಾಗಿ ಹರಡುವ ಸಾಮರ್ಥ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕ ನೀಡಿದ ಬಳಿಕ ಶನಿವಾರ ಬೊಟ್ಸ್ವಾನ, ಎಸ್ವಾಟಿನಿ, ಲೆಸೆಥೊ, ನಮೀಬಿಯ, ದಕ್ಷಿಣ ಆಫ್ರಿಕ ಹಾಗೂ ಜಿಂಬಾಂಬ್ವೆ ದೇಶಗಳನ್ನು ಪಟ್ಟಿಗೆ ಸೇರಿಸಲಾಗಿತ್ತು

ದಕ್ಷಿಣ ಆಫ್ರಿಕದಿಂದ ಜರ್ಮನಿಗೆ ನವೆಂರ್ 24ರಂದು ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ನೆದರ್‌ಲ್ಯಾಂಡ್ ಗೆ ಶುಕ್ರವಾರ ದಕ್ಷಿಣ ಆಫ್ರಿಕದಿಂದ ವಿಮಾನದಲ್ಲಿ ಕೆಲವು ವ್ಯಕ್ತಿಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು ಅವರನ್ನು ಐಸೋಲೇಶನ್‌ನಲ್ಲಿರಿಸಲಾಗಿದೆಯೆಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News