ಟರ್ಕಿ: ವಿತ್ತ ಸಚಿವರ ಬದಲಾವಣೆ

Update: 2021-12-02 17:51 GMT
ಟರ್ಕಿ ರಿಸೆಪ್ ಎರ್ದೋಗನ್(photo:twitter/@RTErdogan)

ಅಂಕಾರ, ಡಿ.2: ಟರ್ಕಿಯಲ್ಲಿ ತೀವ್ರ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಹಣದುಬ್ಬರ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವಂತೆಯೇ ದೇಶದ ವಿತ್ತ ಸಚಿವರನ್ನು ಬದಲಾಯಿಸಿ ಅಧ್ಯಕ್ಷ ರಿಸೆಪ್ ಎರ್ದೋಗನ್ ಆದೇಶ ಹೊರಡಿಸಿದ್ದಾರೆ.

ವಿತ್ತ ಸಚಿವ ಲುತ್ಫಿ ಎಲ್ವಾನ್ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು ಸಹಾಯಕ ವಿತ್ತಸಚಿವರಾಗಿದ್ದ ನರೆದ್ದೀನ್ ನೆಬಾಟಿಯನ್ನು ನೂತನ ವಿತ್ತಸಚಿವರನ್ನಾಗಿ ನೇಮಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಬುಧವಾರ ಮಧ್ಯರಾತ್ರಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ 57 ವರ್ಷದ ನೆಬಾಟಿ, ರಾಜಕೀಯ ವಿಜ್ಞಾನ ಮತ್ತು ಸಾರ್ವಜನಿಕ ಆಡಳಿತ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಈ ವರ್ಷ ಅಮೆರಿಕದ ಡಾಲರ್ ಎದುರು ಟರ್ಕಿಯ ಕರೆನ್ಸಿ ಲಿರಾದ ಮುಖಬೆಲೆ 40%ಕ್ಕೂ ಅಧಿಕ ಕುಸಿತ ದಾಖಲಿಸಿದ್ದು ವಿಶ್ವದ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆ ಕರೆನ್ಸಿಯಲ್ಲಿ ಇದು ಕಳಪೆ ನಿರ್ವಹಣೆಯಾಗಿದೆ. 2020ರ ನವೆಂಬರ್‌ನಲ್ಲಿ ವಿತ್ತ ಸಚಿವರಾಗಿ ನೇಮಕಗೊಂಡಿದ್ದ ಎಲ್ವಾನ್ ಅವರ ಕಾರ್ಯಾವಧಿಯಲ್ಲಿ ಆರ್ಥಿಕತೆಗೆ ಸಂಬಂಧಿಸಿ ಹಲವು ಸಮಸ್ಯೆಗಳು ಉದ್ಭವಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News