ಅಮೆರಿಕ, ಆಸ್ಟ್ರೇಲಿಯದಲ್ಲೂ ಒಮೈಕ್ರಾನ್ ಪತ್ತೆ

Update: 2021-12-03 18:14 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್,ಡಿ.3: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನವೈರಸ್‌ನ ರೂಪಾಂತರಿ ಒಮೈಕ್ರಾನ್ ಸ್ಥಳೀಯವಾಗಿ ಹರಡಿರುವ ಪ್ರಕರಣಗಳು ಪತ್ತೆಯಾಗಿರುವುದಾಗಿ ಅಮೆರಿಕ ಹಾಗೂ ಆಸ್ಟ್ರೇಲಿಯ ಗುರುವಾರ ಘೋಷಿಸಿವೆ. ಒಮೈಕ್ರಾನ್ ವೈರಸ್‌ನ ಹರಡುವುದನ್ನು ಮೊಳಕೆಯಲ್ಲೇ ಚಿವುಟಲು ವಿಶ್ವದಾದ್ಯಂತ ಸರಕಾರಗಳು ಯತ್ನಿಸುತ್ತಿರುವಂತೆಯೇ ಈ ಮಾರಕ ಸೋಂಕು ಹಲವು ದೇಶಗಳಲ್ಲಿ ಪತ್ತೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಒಮೈಕ್ರಾನ್ ಉಳಿದ ರೂಪಾಂತರಿ ವೈರಸ್‌ಗಳಿಗಿಂತ ಗಳಿಗಿಂತ ಅಧಿಕ ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಹಾಗೂ ಅದು ಇನ್ನೂ ಹೆಚ್ಚಿನ ಸೋಂಕಿಗೆ ಕಾರಣವಾಗಿದೆಯೇ ಎಂಬುದನ್ನು ನಿರ್ಧರಿಸಲು ತನಗೆ ಕೆಲವು ವಾರಗಳು ಬೇಕಾಗಬಹುದೆಂದು ವಿಶ್ವ ಆರೋಗ್ಯಸಂಸ್ಥೆ ತಿಳಿಸಿದೆ.

ದಕ್ಷಿಣ ಆಫ್ರಿಕದಲ್ಲಿ ಪ್ರಥಮ ಬಾರಿಗೆ ಪತ್ತೆಯಾದ ಒಮೈಕ್ರಾನ್ ವೈರಸ್, ಜಗತ್ತು ಕೋವಿಡ್19 ಸೋಂಕಿನಿಂದ ಸದ್ಯಕ್ಕೆ ಹೊರಬರುವ ಸಾಧ್ಯತೆಯ ಬಗ್ಗೆ ಸಂದೇಹವನ್ನು ಮೂಡಿಸಿದೆ. ಒಮೈಕ್ರಾನ್‌ನಿಂದಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಯುರೋಪ್‌ನಲ್ಲಿ ಕೋವಿಡ್ ಪ್ರಕರಣಗ ಸಂಖ್ಯೆ ಹಾಲಿ ಸೋಂಕಿನ ಪ್ರಕರಣಗಳ ಸಂಖ್ಯೆಗಿಂತ ಅರ್ಧದಷ್ಟು ಅಧಿಕವಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಅಮೆರಿಕದಲ್ಲಿ ಗುರುವಾರ ಒಮೈಕ್ರಾನ್ ಸೋಂಕಿನ ಹತ್ತು ಪ್ರಕರಣಗಳು ದೃಢಪಟ್ಟಿದ್ದು, ಆ ಪೈಕಿ ಐದು ಪ್ರಕರಣಗಳು ನ್ಯೂಯಾರ್ಕ್‌ನಲ್ಲಿಯೇ ವರದಿಯಾಗಿವೆ. ಲಾಸ್ ಏಂಜಲೀಸ್‌ನಲ್ಲಿ ಹಾಗೂ ಹವಾಯಿಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ಒಮೈಕ್ರಾನ್ ಸೋಂಕು ತಗಲಿದ ಹವಾಯಿ ಹಾಗೂ ಮಿನ್ನೆಸೊಟಾದ ಇಬ್ಬರು ನಿವಾಸಿಗಳು, ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದ ಇತಿಹಾಸವನ್ನು ಹೊಂದಿಲ್ಲ, ಹೀಗಾಗಿ ಈ ರೂಪಾಂತರಿ ವೈರಸ್ ಈಗಾಗಲೇ ಅಮೆರಿಕದಲ್ಲಿ ಹರಡುತ್ತಿದೆ ಎಂಬ ಸಂದೇಹಕ್ಕೆ ಪುಷ್ಟಿ ನೀಡಿದೆ.

ಒಮೈಕ್ರಾನ್ ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗುತ್ತಿದ್ದಂತೆಯೇ ಅಧ್ಯಕ್ಷ ಜೋ ಬೈಡನ್ ಅವರು ಮುಂದಿನ ಚಳಿಗಾಲದಲ್ಲಿ ಕೋವಿಡ್19 ವಿರುದ್ಧ ಹೋರಾಟಕ್ಕೆ ನೂತನ ಯೋಜನೆಗಳನ್ನು ರೂಪಿಸಿದ್ದಾರೆ. ಅಮೆರಿಕವು ಗುರುವಾರ ಪ್ರಕಟಿಸಿರುವ ನೂತನ ಕೋವಿಡ್ ನಿಯಮಾವಳಿಗಳ ಪ್ರಕಾರ ಆ ದೇಶಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ತಾವು ವಿಮಾನವೇರುವ ಒಂದು ದಿನದೊಳಗೆ ಕೋವಿಡ್ ಪರೀಕ್ಷೆಗೊಳಗಾಗಿ ನೆಗೆಟಿವ್ ಫಲಿತಾಂಶವನ್ನು ಪಡೆದಿರೇಕಾಗುತ್ತದೆ. ಪ್ರಸ್ತುತ ಅಮೆರಿಕದಲ್ಲಿ ರ್ಯಾಪಿಡ್ ಕೋವಿಡ್19 ಪರೀಕ್ಷೆಗೆ 25 ಡಾಲರ್ ವೆಚ್ಚ ತಗಲುತ್ತಿದ್ದು ಅವನ್ನು ವಿಮಾನ ಕಂಪೆನಿಗಳು ಭರಿಸುತ್ತವೆ ಹಾಗೂ ವಿಮೆಯನ್ನು ಪಡೆದಿರದವರಿಗೆ ಅದನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಆಸ್ಟ್ರೇಲಿಯದ ಸಿಡ್ನಿಯಲ್ಲಿ ಮೂವರು ವಿದ್ಯಾರ್ಥಿಗಳಲ್ಲಿ ಒಮೈಕ್ರಾನ್ ವೈರಸ್ ಸೋಂಕು ದೃಢಪಟ್ಟಿದೆ. ತನ್ನ ಪ್ರಜೆಗಳಲ್ಲದವರು ದೇಶ ಪ್ರವೇಶಿಸುವುದನ್ನು ನಿಷೇಧಿಸಿರುವುದು ಹಾಗೂ ದಕ್ಷಿಣ ಆಫ್ರಿಕಕ್ಕೆ ವಿಮಾನ ಸಂಚಾರ ನಿಷೇಧಿಸಿರುವ ಹೊರತಾಗಿಯೂ ವೈರಸ್ ಪತ್ತೆಯಾಗಿರುವುದು ಆಸ್ಟ್ರೇಲಿಯವನ್ನು ಚಿಂತೆಗೀಡು ಮಾಡಿದೆ.

ಶ್ರೀಲಂಕಾದಲ್ಲಿಯೂ ಕೋವಿಡ್19 ನ ಒಮೈಕ್ರಾನ್ ರೂಪಾಂತರಿ ವೈರಸ್‌ನ ಮೊದಲ ಪ್ರಕರಣ ವರದಿಯಾಗಿದೆ. ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದ ಶ್ರೀಲಂಕಾ ಪ್ರಜೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆಯಂದು ಈ ದ್ವೀಪ ರಾಷ್ಟ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News