ಒಮೈಕ್ರಾನ್‌ನಿಂದ ಸಾವು ಸಂಭವಿಸಿದ ಯಾವುದೇ ಪ್ರಕರಣ ವರದಿಯಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2021-12-04 18:12 GMT

ನ್ಯೂಯಾರ್ಕ್, ಡಿ.4: ಒಮೈಕ್ರಾನ್ ಪ್ರಭೇದದ ಕೋವಿಡ್19 ವೈರಸ್ ಜಗತ್ತಿನಾದ್ಯಂತ ಈವರೆಗೆ ಕನಿಷ್ಠ 38 ದೇಶಗಳಲ್ಲಿ ಪತ್ತೆಯಾಗಿದೆ. ಆದರೆ, ಈವರೆಗೆ ಈ ವೈರಸ್ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದಾಗ್ಯೂ ಒಮೈಕ್ರಾನ್ ವೈರಸ್ ಜಾಗತಿಕ ಆರ್ಥಿಕತೆಗೆ ಭಾರೀ ಹಾನಿಯುಂಟು ಮಾಡಬಹುಂದು ಅದು ಎಚ್ಚರಿಕೆ ನೀಡಿದೆ.

ಅಮೆರಿಕ ಹಾಗೂ ಆಸ್ಟ್ರೇಲಿಯ ದೇಶದಲ್ಲೂ ಒಮೈಕ್ರಾನ್ ವೈರಸ್ ಸೋಂಕು ಹರಡುತ್ತಿರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕದಲ್ಲಿ ಸೋಂಕು ಪೀಡಿತರ ಸಂಖ್ಯೆ 30 ಲಕ್ಷವನ್ನು ದಾಟಿದೆ. ಒಮೈಕ್ರಾನ್ ಸೋಂಕಿತರಲ್ಲಿ ತೀವ್ರ ಅನಾರೋಗ್ಯವನ್ನು ಉಂಟು ಮಾಡುವುದೇ ಅಥವಾ ಈ ಇರುವ ಲಸಿಕೆಗಳು ಸೋಂಕಿನ ವಿರುದ್ಧ ಪರಿಣಾಮಕಾರಿಯೇ ಎಂಬುದನ್ನು ನಿರ್ಧರಿಸಲು ಕೆಲವೇ ವಾರಗಳು ಬೇಕಾಗಬಹುದೆಂದು ಡಬ್ಲು ಎಚ್‌ಓ ಎಚ್ಚರಿಕೆ ನೀಡಿದೆ.

ಒಮೈಕ್ರಾನ್‌ಗೆ ಸಂಬಂಧಿಸಿದ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿರುವುದು ತನ್ನ ಗಮನಕ್ಕೆ ಬಂದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಆದರೆ ವೈರಸ್ ಹರಡುವಿಕೆಯ ವೇಗವನ್ನು ಗಮನಿಸಿದಾಗ ಮುಂದಿನ ಕೆಲವು ತಿಂಗಳುಗಳಲ್ಲಿ ಯುರೋಪ್‌ನ ಅರ್ಧದಷ್ಟು ಕೋವಿಡ್ ಪ್ರಕರಣಗಳಿಗೆ ಒಮೈಕ್ರಾನ್ ಕಾರಣವಾಗಲಿದೆ ಎಂದು ಡಬ್ಲುಎಚ್‌ಓ ತಿಳಿಸಿದೆ.ಡೆಲ್ಟಾ ಹಾಗೂ ಬೇಟಾ ಪ್ರಭೇದದ ಕೊರೋನಾ ವೈರಸ್‌ಗೆ ಹೋಲಿಸಿದರೆ ಒಮೈಕ್ರಾನ್‌ನಿಂದ ಸೋಂಕು ಸಂಭವಿಸುವ ಸಾಧ್ಯತೆ ಮೂರು ಪಟ್ಟು ಅಧಿಕವಾಗಿದೆ ಎಂದು ದಕ್ಷಿಣ ಆಫ್ರಿಕದ ವಿಜ್ಞಾನಿಗಳು ನಡೆಸಿದ ಪ್ರಾಥಮಿಕ ಅಧ್ಯಯನ ವರದಿ ತಿಳಿಸಿದೆ.

ಈ ಮಧ್ಯೆ ಕೆನಡದಲ್ಲಿಯೂ ಒಮೈಕ್ರಾನ್ ಪ್ರಭೇದದ ಒಟ್ಟು 15 ಪ್ರಕರಣಗಳು ವರದಿಯಾಗಿವೆ. ಸೋಂಕಿತರೆಲ್ಲರೂ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದವರಾಗಿದ್ದಾರೆಂದು ಕೆನಡಾದ ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಥೆರೆಸಾ ಟ್ಯಾಮ್ ತಿಳಿಸಿದ್ದಾರೆ. ಈ ಮಧ್ಯೆ ಕೆನಡದ ಯಾರ್ಕ್ ನಗರದ 12 ವರ್ಷದ ಮಗುವಿಗೆ ಒಮೈಕ್ರಾನ್ ಸೋಂಕು ತಗಲಿರುವುದು ವರದಿಯಾಗಿದೆ.

ಈ ಮಗುವು ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿತ್ತು. ಟೊರೋಂಟೊದಲ್ಲಿ ಒಮೈಕ್ರಾನ್‌ನ ಮೂರು ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ಸೋಂಕಿತರಲ್ಲಿ ಇಬ್ಬರು ಇತ್ತೀಚೆಗೆ ನೈಜೀರಿಯದಿಂದ ವಾಪಸಾದವರಾಗಿದ್ದಾರೆ. ಇನ್ನೋರ್ವವ್ಯಕ್ತಿ ಸ್ವಿಟ್ಜರ್‌ಲ್ಯಾಂಡ್‌ನಿಂದ ವಾಪಾಸಾಗಿದ್ದಾರೆ.

ಯುರೋಪ್‌ನಲ್ಲಿ ಡೆಲ್ಟಾ ಸೋಂಕಿತರ ಸಂಖ್ಯೆ ಹೆಚ್ಚಳ:

ಮಲೇಶ್ಯದಲ್ಲಿ ದಕ್ಷಿಣ ಆಫ್ರಿಕದಿಂದ ನವೆಂಬರ್ 19ರಂದು ಆಗಮಿಸಿದ ವಿದೇಶಿ ವಿದ್ಯಾರ್ಥಿಯೊಬ್ಬನಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ಈ ಮಧ್ಯೆ ಯುರೋಪ್‌ನಲ್ಲಿ ಡೆಲ್ಟಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದ್ದು ಯುರೋಪ್ ಒಕ್ಕೂಟದ ಸರಕಾರಗಳು ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ, ಲಾಕ್‌ಡೌನ್ ಅಥವಾ ಕರ್ಫ್ಯೂ ಹೇರಿಕೆಗೆ ಮುಂದಾಗಿವೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News