ಅಮೆರಿಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೊರೋನ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯ‌

Update: 2021-12-05 17:08 GMT

ವಾಷಿಂಗ್ಟನ್, ಡಿ.5: ಒಮೈಕ್ರಾನ್ ಸೋಂಕಿನ ಆತಂಕ ಹೆಚ್ಚುತ್ತಿರುವಂತೆಯೇ, ಅಮೆರಿಕಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರೂ ಕಡ್ಡಾಯವಾಗಿ ಕೊರೋನ ಸೋಂಕು ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಅಮೆರಿಕ ಸೂಚಿಸಿದೆ.ಮೆರಿಕಕ್ಕೆ ಪ್ರಯಾಣಿಸುವ ವಿಮಾನದಲ್ಲಿ ಪ್ರಯಾಣಿಸುವವರು (2 ವರ್ಷಕ್ಕಿಂತ ಮೇಲಿನ ವಯಸ್ಸಿನವರು) ಕೊರೋನ ಸೋಂಕು ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದ್ದು ಹೊಸ ನಿಯಮ ಡಿಸೆಂಬರ್ 6ರಿಂದ ಜಾರಿಗೆ ಬರಲಿದೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಹೇಳಿದೆ. ‌

ನೂತನ ನಿಯಮಾವಳಿ ಬಗ್ಗೆ ಭಾರತದ ಅಧಿಕಾರಿಗಳು ಅಮೆರಿಕದಲ್ಲಿ ವಾಸಿಸುವ ಭಾರತೀಯ ಅಮೆರಿಕನ್ನರಿಗೆ ಶನಿವಾರ ಮಾಹಿತಿ ನೀಡಿದ್ದಾರೆ. ಅಮೆರಿಕಕ್ಕೆ ಪ್ರಯಾಣಿಸುವ 1 ದಿನ ಮೊದಲು ಕೊರೋನ ಸೋಂಕು ಪರೀಕ್ಷೆ ನಡೆಸಿರುವ ವರದಿ ಅಥವಾ ಕಳೆದ 90 ದಿನದಲ್ಲಿ ಕೊರೋನ ಸೋಂಕಿನಿಂದ ಚೇತರಿಸಿಕೊಂಡಿರುವ ವರದಿಯನ್ನು ಹೊಂದಿರುವ ಪ್ರಯಾಣಿಕರು ಮಾತ್ರ ಅಮೆರಿಕಕ್ಕೆ ಪ್ರಯಾಣಿಸುವ ವಿಮಾನವನ್ನು ಏರಬಹುದು . ಜತೆಗೆ, ಎಲ್ಲಾ ಪ್ರಯಾಣಿಕರೂ ತಾವು ಒದಗಿಸಿದ ದಾಖಲೆಪತ್ರ ಸತ್ಯ ಎಂದು ದೃಢೀಕರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. 

1 ದಿನ ಮೊದಲು ಅಂದರೆ ವಿಮಾನ ಹೊರಡುವ ದಿನದ ಒಂದು ದಿನ ಮೊದಲು. 24 ಗಂಟೆ ಮೊದಲು ಎಂಬ ಪದ ಬಳಕೆಯಿಂದ ಪ್ರಯಾಣಿಕರಲ್ಲಿ ಮತ್ತು ವಿಮಾನಯಾನ ಸಂಸ್ಥೆಗಳ ನಿರ್ವಾಹಕರಿಗೆ ಗೊಂದಲ ಆಗಬಾರದು ಎಂದು ಈ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶನಿವಾರ ನ್ಯೂಯಾರ್ಕ್ ನಲ್ಲಿ ಒಮೈಕ್ರಾನ್ ಸೋಂಕಿನ 3 ಪ್ರಕರಣ ವರದಿಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8ಕ್ಕೇರಿದೆ ಎಂದು ನ್ಯೂಯಾರ್ಕ್ ನ ಆರೋಗ್ಯಾಧಿಕಾರಿ ಮೇರಿ ಬ್ಯಾಸೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News