ಟರ್ಕಿ:ಅಧ್ಯಕ್ಷರ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಯ ಕಾರಿನಡಿ ಬಾಂಬ್ ಪತ್ತೆ

Update: 2021-12-05 17:50 GMT
PHOTO : PTI

ಅಂಕಾರ, ಡಿ.5: ಪೂರ್ವ ಟರ್ಕಿಯಲ್ಲಿ ಅಧ್ಯಕ್ಷ ತಯೀಪ್ ಎರ್ಡೋಗನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯ ಕಾರಿನಡಿ ಇರಿಸಿದ್ದ ಬಾಂಬ್ ಅನ್ನು ಟರ್ಕಿಯ ಪೊಲೀಸರು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.

ಸಿರ್ಟ್ ಎಂಬಲ್ಲಿ ಅಧ್ಯಕ್ಷ ಎರ್ಡೋಗನ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದರು. ಸಿರ್ಟ್ ಗಿಂತ ಸುಮಾರು 200 ಕಿ.ಮೀ ದೂರದ, ಸಿರಿಯನ್ ಗಡಿಭಾಗದ ಬಳಿಯಿರುವ ನ್ಯುಸೇಬಿನ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಸಿರ್ಟ್ ನಗರದ ಕಾರ್ಯಕ್ರಮದ ಭದ್ರತೆಗೆ ನಿಯೋಜಿಸಲಾಗಿತ್ತು. ಅಧಿಕಾರಿ ಪ್ರಯಾಣಿಸಬೇಕಿದ್ದ ಕಾರಿನಡಿ ಬಾಂಬ್ ಇರಿಸಿರುವುದನ್ನು ಸಕಾಲದಲ್ಲಿ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ವರದಿ ಹೇಳಿದೆ.
 
ಎರ್ಡೋಗನ್ ಅವರ ಕಾರ್ಯಕ್ರಮ ನಿಗದಿಯಂತೆ ನಡೆದಿದ್ದು ಜನರಲ್ಲಿ ಗೊಂದಲ ಮೂಡಬಾರದೆಂಬ ಕಾರಣಕ್ಕೆ ಕಾರ್ಯಕ್ರಮ ಮುಗಿದ ಬಳಿಕ ವರದಿ ಪ್ರಕಟಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News