ಮ್ಯಾನ್ಮಾರ್ ನಲ್ಲಿ ಪ್ರತಿಭಟನಾಕಾರರ ಮೇಲೆ ಕಾರು ನುಗ್ಗಿಸಿದ ಪೊಲೀಸರು: ಕನಿಷ್ಟ 5 ಮಂದಿ ಮೃತ್ಯು; ಹಲವರಿಗೆ ಗಾಯ

Update: 2021-12-05 18:27 GMT

ಯಾಂಗ್ಯಾಂಗ್, ಡಿ.5: ಮ್ಯಾನ್ಮಾರ್‌ನಲ್ಲಿ ಪ್ರತಿಭಟನಾ ನಿರತರ ಗುಂಪಿನ ಮೇಲೆ ಭದ್ರತಾ ಪಡೆಗಳ ಕಾರು ನುಗ್ಗಿದ್ದರಿಂದ ಕನಿಷ್ಟ 5 ಮಂದಿ ಮೃತಪಟ್ಟು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪದಚ್ಯುತ ನಾಯಕಿ ಆಂಗ್ಸಾನ್ ಸ್ಯೂಕಿ ವಿರುದ್ಧ ದಾಖಲಾಗಿರುವ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಒಂದರ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ, ಇದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಶನಿವಾರ 2 ನಗರಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು ರವಿವಾರ ರಾಜಧಾನಿ ಯಾಂಗ್ಯಾಂಗ್ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. 

ಈ ಸಂದರ್ಭ ಭದ್ರತಾ ಪಡೆಗಳ ವಾಹನವೊಂದು ಪ್ರತಿಭಟನಾ ನಿರತರ ಗುಂಪಿಗೆ ನುಗ್ಗಿದ್ದು ಹಲವು ಮಂದಿ ನೆಲದ ಮೇಲೆ ಬಿದ್ದುಕೊಂಡಿರುವ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರತಿಭಟನಾ ನಿರತರ ಗುಂಪನ್ನು ಸಮೀಪಿಸುತ್ತಿದ್ದಂತೆಯೇ ಭದ್ರತಾ ಪಡೆಗಳ ಕಾರಿನ ವೇಹ ಹೆಚ್ಚಿತು. ಜನರ ಮೇಲೆಯೇ ವಾಹನ ಚಲಾಯಿಸಿದಂತೆ ಭಾಸವಾಯಿತು. ಸೂಕಿ ಪರ ಬ್ಯಾನರ್ ಹಿಡಿದಿದ್ದವರು ನೆಲದ ಮೇಲೆ ಬಿದ್ದರು. ಆಗ ಕಾರಿನಿಂದ ಕೆಳಗೆ ಜಿಗಿದ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತು. ಪ್ರತಿಭಟನಾಕಾರರಲ್ಲಿ ಕೆಲವರು ರಕ್ತದ ಮಡುವಿನಲ್ಲಿ ಬಿದ್ದರೆ ಇನ್ನು ಕೆಲವರು ಅಲ್ಲಿಂದ ಓಡಿದರು  ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ‘ದಿ ರಾಯ್ಟರ್ಸ್ ವರದಿ ಮಾಡಿದೆ. ಈ ಪ್ರಕರಣವನ್ನು ವಿರೋಧ ಪಕ್ಷಗಳ ಛಾಯಾ ಸರಕಾರ ತೀವ್ರವಾಗಿ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News