ಇರಾಕ್‌ನಲ್ಲಿ ಸ್ಫೋಟ: ಕನಿಷ್ಟ 4 ಮಂದಿ ಮೃತ್ಯು ಹಲವರಿಗೆ ಗಾಯ

Update: 2021-12-07 17:58 GMT

ಬಗ್ದಾದ್, ಡಿ.6: ಇರಾಕ್‌ನ ದಕ್ಷಿಣದಲ್ಲಿರುವ ಬಾಸ್ರಾ ನಗರದ ಕೇಂದ್ರಭಾಗದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಟ 4 ಮಂದಿ ಬಲಿಯಾಗಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ ಇರಾಕ್‌ನ ಸೇನೆ ಹೇಳಿದೆ.

ಮೋಟಾರು ಬೈಕಿನಲ್ಲಿ ಸ್ಫೋಟಕ ಇರಿಸಲಾಗಿತ್ತು. ಸ್ಫೋಟದ ಸದ್ದು ಸುತ್ತಮುತ್ತಲಿನ ಪ್ರದೇಶವನ್ನು ನಡುಗಿಸಿದ್ದು ಕಪ್ಪು ದಟ್ಟ ಹೊಗೆ ಪ್ರದೇಶದಲ್ಲಿ ವ್ಯಾಪಿಸಿದೆ. ಬೈಕ್‌ನ ಸನಿಹವಿದ್ದ 2 ಕಾರುಗಳು ಬೆಂಕಿಯಲ್ಲಿ ಸುಟ್ಟುಹೋಗಿದೆ. ಸ್ಫೋಟದಿಂದ ಕನಿಷ್ಟ 4 ಮಂದಿ ಮೃತರಾಗಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ವಿಧಿವಿಜ್ಞಾನ ತಜ್ಞರು ಮತ್ತು ವಿಶೇಷ ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ರವಾನಿಸಿದ್ದು ಸ್ಫೋಟದ ಬಗ್ಗೆ ಹೆಚ್ಚಿನ ವಿವರವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಸ್ರಾದ ಅಲ್-ಜುಮೌರಿ ಆಸ್ಪತ್ರೆಯ ಎದುರುಭಾಗದಲ್ಲಿ ಸ್ಫೋಟ ಸಂಭವಿಸಿದ್ದು ಇದುವರೆಗೆ ಯಾವುದೇ ಸಂಘಟನೆ ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಹಿರಿಯ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಸ್ಫೋಟದಿಂದ ಇತರ 20 ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಮೂಲಗಳು ಹೇಳಿಕೆ ನೀಡಿವೆ. ಅಕ್ಟೋಬರ್ 10ರಂದು ನಡೆದ ಸಂಸತ್ ಚುನಾವಣೆಯಲ್ಲಿ ಜನಪ್ರಿಯ ಮುಖಂಡ ಮುಖ್ತಾದ ಅಲ್-ಸದ್ರ್ ಭರ್ಜರಿ ಗೆಲುವು ಸಾಧಿಸಿದಂದಿನಿಂದ ಇರಾಕ್‌ನಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News