ಬಾಂಗ್ಲಾ: ವಿದ್ಯಾರ್ಥಿಯ ಹತ್ಯೆ ಪ್ರಕರಣ; 20 ಸಹ ವಿದ್ಯಾರ್ಥಿಗಳಿಗೆ ಮರಣದಂಡನೆ

Update: 2021-12-08 17:58 GMT
ಸಾಂದರ್ಭಿಕ ಚಿತ್ರ

ಢಾಕಾ, ಡಿ.8: ಸಾಮಾಜಿಕ ಮಾಧ್ಯಮದಲ್ಲಿ ಸರಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು 20 ಸಹ ವಿದ್ಯಾರ್ಥಿಗಳಿಗೆ ಮರಣದಂಡನೆ, ಇತರ 5 ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.

ಬಾಂಗ್ಲಾದೇಶ್ ಯುನಿವರ್ಸಿಟಿ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ(ಬಿಯುಇಟಿ)ಯ ದ್ವಿತೀಯ ವರ್ಷದ ವಿದ್ಯಾರ್ಥಿ, 21 ವರ್ಷದ ಅಬ್ರಾರ್ ಫಹಾದ್ರನ್ನು 2019ರ ಅಕ್ಟೋಬರ್ 7ರಂದು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆ ಛಾತ್ರ ಲೀಗ್‌ನ  ಥಳಿಸಿ ಹತ್ಯೆ ಮಾಡಿತ್ತು.

ಹತ್ಯೆಯನ್ನು ಖಂಡಿಸಿ ವಿದ್ಯಾರ್ಥಿಗಳಿಂದ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಢಾಕಾ ಕ್ಷಿಪ್ರ ನ್ಯಾಯಮಂಡಳಿಯ ನ್ಯಾಯಾಧೀಶರು ‘ ಇಂತಹ ಕ್ರೂರ ಘಟನೆ ಮತ್ತೊಮ್ಮೆ ನಡೆಯಬಾರದು ಎಂಬ ಕಾರಣಕ್ಕೆ ಆಪಾದಿತರಿಗೆ ಗರಿಷ್ಟ ಶಿಕ್ಷೆ ವಿಧಿಸಲಾಗಿದೆ. ಅಪರಾಧದ ಗಂಭೀರತೆಗೆ ಅನುಗುಣವಾಗಿ, ನಾವು ನ್ಯಾಯದ ಕತ್ತಿಯನ್ನು ಬಳಸಲು ಹಿಂಜರಿಯಬಾರದು’ ಎಂದು ಹೇಳಿದರು.

ನ್ಯಾಯಾಲಯದ ತೀರ್ಪಿನಿಂದ ಸಂತೋಷ ಮತ್ತು ಸಮಾಧಾನವಾಗಿದೆ. ನನ್ನ ಮಗನನ್ನು ಮರಳಿ ಪಡೆಯಲು ಸಾಧ್ಯವಾಗದಿದ್ದರೂ, ಈ ತೀರ್ಪು ನಮ್ಮ ಕುಟುಂಬಕ್ಕೆ ತುಸು ಸಮಾಧಾನ ತಂದಿದೆ’ ಎಂದು ಮೃತ ವಿದ್ಯಾರ್ಥಿಯ ತಂದೆ ಬರ್ಖತ್ ಉಲ್ಲಾ ಹೇಳಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಪ್ರತಿವಾದಿ ವಕೀಲರು ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News