ಮ್ಯಾನ್ಮಾರ್: ಸೇನಾ ಮುಖಂಡ ಮಿನ್ ಆಂಗ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ
ಯಾಂಗಾನ್, ಡಿ.10: : ಮ್ಯಾನ್ಮಾರ್‌ನಲ್ಲಿ ಫೆ.1ರಂದು ನಡೆದ ಸೇನೆಯ ದಂಗೆಯನ್ನು ವಿರೋಧಿಸಿದ ಪ್ರತಿಭಟನಾಕಾರರನ್ನು ಮತ್ತು ಕಾರ್ಯಕರ್ತರನ್ನು ಮಾರಣಾಂತಿಕವಾಗಿ ದಮನಿಸಿದ ಸೇನೆಯ ಮುಖ್ಯಸ್ಥರಾಗಿರುವ ಮ್ಯಾನ್ಮಾರ್‌ನ ಸೇನಾ ಮುಖಂಡ ಮಿನ್ ಆಂಗ್ ಸ್ಲಿಂಗ್ ಮನುಕುಲದ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ.
ಪ್ರತಿಭಟನಾ ಚಳವಳಿಯ ವಿರುದ್ಧ ಹಿಂಸಾತ್ಮಕ ದಮನದ ಭಾಗವಾಗಿ ಚಿತ್ರಹಿಂಸೆಯ ವ್ಯಾಪಕ ಮತ್ತು ವ್ಯವಸ್ಥಿತ ಬಳಕೆಯ ಬಗ್ಗೆ ಕ್ರಿಮಿನಲ್ ವಿಚಾರಣೆ ಆರಂಭಿಸುವಂತೆ ಮ್ಯಾನ್ಮಾರ್ ಉತ್ತರದಾಯಿತ್ವ ಘಟಕ(ಎಂಎಪಿ)ವು ಹೇಗ್ ಮೂಲದ ಐಸಿಸಿಗೆ ಶುಕ್ರವಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದೆ. ಕಾನೂಬಾಹಿರ ದಂಗೆಯ ಮುಖಂಡರ ಅಧೀನದಲ್ಲಿರುವ ಭದ್ರತಾ ಪಡೆ ಎಸಗಿದ ಸಾಮೂಹಿಕ ದೌರ್ಜನ್ಯ ಅಪರಾಧಕ್ಕೆ ಆ ಮುಖಂಡರೇ ಹೊಣೆಯಾಗಿದ್ದಾರೆ . ಆದ್ದರಿಂದ ಅಪರಾಧ ಸಾಬೀತಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಎಂಎಪಿ ನಿರ್ದೇಶಕ ಕ್ರಿಸ್ ಗ್ಯುನೆಸ್ ಹೇಳಿದ್ದಾರೆ. ಭಿನ್ನಮತೀಯರ ವಿರುದ್ಧ ಮಿಲಿಟರಿ ಸರಕಾರದ ತಂತ್ರವನ್ನು ‘ ಕ್ರೂರ ಬಲಪ್ರಯೋಗದ ಭಯೋತ್ಪಾದನಾ ಅಭಿಯಾನ’ ಎಂದು ಕಳೆದ ಜುಲೈಯಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಬಣ್ಣಿಸಿದ್ದರು.
ಸೇನಾ ದಂಗೆಯ ಬಳಿಕ 75 ಮಕ್ಕಳ ಸಹಿತ ಕನಿಷ್ಟ 1,305 ಜನರು ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ನಡೆಸಿದ ಬಲಪ್ರಯೋಗದ ಸಂದರ್ಭ ಮೃತಪಟ್ಟಿದ್ದಾರೆ. ಕನಿಷ್ಟ 10,756 ಮಂದಿಯನ್ನು ಬಂಧಿಸಲಾಗಿದೆ ಎಂದು ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್(ಎಎಪಿಪಿ) ಬುಧವಾರ ವರದಿ ಮಾಡಿದೆ. ಈ ಮಧ್ಯೆ ಸೇನೆಯ ಮಿತಿಮೀರಿದ ಹಿಂಸಾಚಾರದಿಂದ ಆಕ್ರೋಶಗೊಂಡಿರುವ ಪ್ರತಿಭಟನಾಕಾರರೂ ಸೇನೆಯ ವಿರುದ್ಧ ಪ್ರತೀಕಾರ ದಾಳಿಗೆ ಮುಂದಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ಮ್ಯಾನ್ಮಾರ್‌ನ ವಾಯವ್ಯ ಪ್ರಾಂತದ ಸಗಾಯಿಂಗ್ ವಲಯದಲ್ಲಿ ಭದ್ರತಾ ಪಡೆಗಳು 11 ಮಂದಿಯ ಮೇಲೆ ಗುಂಡು ಹಾರಿಸಿ ಜೀವಂತ ಸುಟ್ಟುಹಾಕಿದ ವರದಿಯ ಬಗ್ಗೆ ವಿಶ್ವಸಂಸ್ಥೆಯ ವಕ್ತಾರ ಸ್ಟಿಫಾನ್ ಡ್ಯುಜಾರಿಕ್ ಖಂಡಿಸಿದ್ದಾರೆ. ಘಟನೆಯ ವರದಿಯಿಂದ ಅಮೆರಿಕಕ್ಕೆ ಆಘಾತವಾಗಿದೆ ಎಂದು ಅಮೆರಿಕದ ಗೃಹ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಪ್ರತಿಕ್ರಿಯಿಸಿದ್ದಾರೆ.
ಮ್ಯಾನ್ಮಾರ್‌ನ ಸೇನೆ ಆ ದೇಶದ ಜನರನ್ನು ದಮನಿಸಲು ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಸೇನೆ ವ್ಯಾಪಕವಾಗಿ ನಡೆಸುವ ಭಯಾನಕ ಮತ್ತು ಕ್ರೂರ ಹಿಂಸಾಚಾರವು ಮ್ಯಾನ್ಮಾರ್ನ ಸೇನೆಯ ನಿರ್ಭಯ ಸಂಸ್ಕೃತಿಕೆ ಅಂತ್ಯ ಹಾಡುವ ಅನಿವಾರ್ಯತೆಯನ್ನು ಸಂಕೇತಿಸುತ್ತದೆ ಎಂದು ನೆಡ್ ಪ್ರೈಸ್ ಹೇಳಿದ್ದಾರೆ. ಈ ಮಧ್ಯೆ ಗುರುವಾರ ಸೇನಾಪಡೆ ಮತ್ತಷ್ಟು ಹಿಂಸಾಚಾರ ನಡೆಸಿದ್ದು ಮೋನ್ ರಾಜ್ಯದಲ್ಲಿ ಮನೆಗಳನ್ನು ಸುಟ್ಟುಹಾಕಿದ್ದಲ್ಲದೆ ಓರ್ವ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮಗಳು ವರದಿ ಮಾಡಿವೆ.