ಲೆಬನಾನ್: ಪೆಲೆಸ್ತೀನ್ ಶಿಬಿರದಲ್ಲಿ ಸ್ಫೋಟ; ಹಲವರಿಗೆ ಗಾಯ

Update: 2021-12-11 18:01 GMT
ಸಾಂದರ್ಭಿಕ ಚಿತ್ರ

ಬೈರೂತ್, ಡಿ.11: ದಕ್ಷಿಣ ಲೆಬನಾನ್ ನ ಬಂದರುನಗರ ಟೈರ್ ಎಂಬಲ್ಲಿರುವ ಪೆಲೆಸ್ತೀನ್ ನಿರಾಶ್ರಿತರ ಶಿಬಿರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
 
ಸ್ಫೋಟದಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ. ಆದರೆ ಸಾವು ಸಂಭವಿಸಿಲ್ಲ, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬುರ್ಜ್ ಅಲ್ ಶೆಮಾಲಿ ಶಿಬಿರದಲ್ಲಿರುವ ಹಮಾಸ್ ಸಂಘಟನೆಯ ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಎನ್ಎನ್ಎ ವರದಿ ಮಾಡಿದ್ದು ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದಿದೆ. 

ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಅನುವಾಗಲು ಸಂಗ್ರಹಿಸಿದ್ದ ಆಕ್ಸಿಜನ್ ಡಬ್ಬಿಗಳಿಗೆ ಬೆಂಕಿ ಹತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಹಮಾಸ್‌ಗೆ ನಿಕಟವಾಗಿರುವ ಮಾಧ್ಯಮಸಂಸ್ಥೆ ಶೆಹಾಬ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದಕ್ಷಿಣ ಲೆಬನಾನ್‌ನಲ್ಲಿರುವ ಸುಮಾರು 12 ಪೆಲೆಸ್ತೀನ್ ಶಿಬಿರದ ಮೇಲುಸ್ತುವಾರಿಯನ್ನು ಹಮಾಸ್, ಫತಾ ಚಳವಳಿ ಸೇರಿದಂತೆ ಪೆಲೆಸ್ತೀನ್ ಸಶಸ್ತ್ರ ವಿಭಾಗ ನಿರ್ವಹಿಸುತ್ತದೆ. ಈ ಶಿಬಿರಗಳನ್ನು ಲೆಬನಾನ್ ಅಧಿಕಾರಿಗಳು ಪ್ರವೇಶಿಸುವಂತಿಲ್ಲ. ಸ್ಫೋಟ ಸಂಭವಿಸಿದ ಪ್ರದೇಶದ ಸುತ್ತಮುತ್ತಲಿನ ಜನರನ್ನು ತೆರವುಗೊಳಿಸಿದ್ದು ರಕ್ಷಣಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಪೆಲೆಸ್ತೀನ್ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News