ಅಮೆರಿಕದ ಪ್ರಜಾಪ್ರಭುತ್ವ ಸಾಮೂಹಿಕ ವಿನಾಶದ ಅಸ್ತ್ರ : ಚೀನಾ ವಾಗ್ದಾಳಿ‌

Update: 2021-12-11 18:09 GMT

ಬೀಜಿಂಗ್, ಡಿ.11: ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆ ಸಾಮೂಹಿಕ ವಿನಾಶದ ಅಸ್ತ್ರವಾಗಿದೆ. ಈ ಅಸ್ತ್ರವನ್ನು ಬಳಸಿಕೊಂಡು ದೀರ್ಘ ಕಾಲದಿಂದ ಇತರ ದೇಶಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಅಮೆರಿಕ ಅಧ್ಯಕ್ಷ ಬೈಡನ್ ಶೀತಲಯುದ್ಧದ ಯುಗದ ಸೈದ್ಧಾಂತಿಕ ವಿಭಜನೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಚೀನಾ ಟೀಕಿಸಿದೆ.

ನಿರಂಕುಶ ಪ್ರಭುತ್ವದ ವಿರುದ್ಧ ಸಮಾನಮನಸ್ಕ ಮಿತ್ರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಶೃಂಗಸಭೆಯಲ್ಲಿ ಮುಖಂಡರು ಘೋಷಣೆ ಹೊರಡಿಸಿದ ಬಳಿಕ ಚೀನಾ ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದೆ. ಚೀನಾ, ರಶ್ಯಾ, ಹಂಗರಿ ಸಹಿತ ಹಲವು ದೇಶಗಳನ್ನು ಈ ಶೃಂಗಸಭೆಯಿಂದ ಹೊರಗಿಡಲಾಗಿದೆ. ಆದರೆ ತೈವಾನ್‌ಗೆ ಆಹ್ವಾನ ನೀಡಿರುವುದು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ.

ಅಮೆರಿಕವು ಸಾಗರೋತ್ತರ ಪ್ರದೇಶದಲ್ಲಿ ವರ್ಣ ನೀತಿಗೆ ಪ್ರಚೋದನೆ ನೀಡುತ್ತಿದೆ. ಆ ದೇಶ ಆಯೋಜಿಸಿದ್ದ ಶೃಂಗಸಭೆಯು ಸೈದ್ಧಾಂತಿಕ ಪೂರ್ವಾಗ್ರಹದ ಗೆರೆಗಳನ್ನು ಎಳೆಯಲು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯುಧ ಮತ್ತು ಸಾಧನವನ್ನಾಗಿಸಲು ಮತ್ತು ವಿಭಜನೆ ಹಾಗೂ ಸಂಘರ್ಷವನ್ನು ಪ್ರಚೋದಿಸಲು ಬಳಕೆಯಾಗಿದೆ . ಚೀನಾವು ಎಲ್ಲಾ ರೀತಿಯ ಹುಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಡೆಯಲು ಮತ್ತು ವಿರೋಧಿಸಲು ಬದ್ಧವಾಗಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ, ತೈವಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವುದಾಗಿ ನಿಕರಾಗುವ ಘೋಷಿಸಿದೆ. ಇದರೊಂದಿಗೆ ತೈವಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಬೆಳೆಸಿರುವ ದೇಶಗಳ ಸಂಖ್ಯೆ 14ಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ಎಲ್ಲಾ ದೇಶಗಳೂ ತೈವಾನ್ ಜತೆಗೆ ರಾಜತಾಂತ್ರಿಕ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಅಮೆರಿಕ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News