ದ.ಆಫ್ರಿಕಾ ಅಧ್ಯಕ್ಷರಿಗೆ ಕೊರೋನ ಸೋಂಕು ದೃಢ‌

Update: 2021-12-13 18:09 GMT
ಸಿರಿಲ್ ರಮಫೋಸಾ(photo:twitter/@CyrilRamaphosa)
 

ಜೊಹಾನ್ಸ್ಬರ್ಗ್, ಡಿ.13: ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸಾಗೆ ಕೊರೋನ ಸೋಂಕು ದೃಢಪಟ್ಟಿದ್ದು ಸೋಂಕಿನ ಸೌಮ್ಯ ಲಕ್ಷಣ ಇದಾಗಿದೆ ಎಂದು ಅಧ್ಯಕ್ಷರ ಕಚೇರಿ ರವಿವಾರ ಹೇಳಿದೆ.

ಈ ಮಧ್ಯೆ, ದಕ್ಷಿಣ ಆಫ್ರಿಕಾದಲ್ಲಿ ರವಿವಾರ ಒಂದೇ ದಿನ 37,875 ಸೋಂಕು ಪ್ರಕರಣ ದಾಖಲಾಗಿದ್ದು ಇದು ಹೊಸ ದಾಖಲೆಯಾಗಿದೆ. ಈ ಹಿಂದೆ ಒಂದೇ ದಿನ 17,154 ಪ್ರಕರಣ ಪತ್ತೆಯಾಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಮಾಜಿ ಉಪಪ್ರಧಾನಿ ಎಫ್‌ಡಬ್ಲ್ಯು ಡಿ ಕ್ಲರ್ಕ್ ಗೌರವಾರ್ಥ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅಧ್ಯಕ್ಷರು ಅಸ್ವಸ್ಥರಾದರು. ಅವರು ಲವಲವಿಕೆಯಿಂದ ಇದ್ದಾರೆ. ದಕ್ಷಿಣ ಆಫ್ರಿಕಾ ಮಿಲಿಟರಿ ಆರೋಗ್ಯ ಸೇವಾ ವಿಭಾಗ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಹೇಳಿಕೆ ತಿಳಿಸಿದೆ.

ಅಧ್ಯಕ್ಷರು ಸಂಪೂರ್ಣ ಲಸಿಕೆ ಪಡೆದಿದ್ದರು. ಇದೀಗ ಅವರು ಕೇಪ್‌ಟೌನ್‌ನಲ್ಲಿ ಪ್ರತ್ಯೇಕ ವಾಸದಲ್ಲಿದ್ದು ತಮ್ಮ ಎಲ್ಲಾ ಕರ್ತವ್ಯಗಳ ಜವಾಬ್ದಾರಿಯನ್ನು ಉಪಾಧ್ಯಕ್ಷ ಡೇವಿಡ್ ಮಬುಝಾಗೆ ವಹಿಸಿದ್ದಾರೆ ಎಂದು ಸಚಿವ ಮೊಂಡ್ಲಿ ಗುಂಗೂಬ್ಲೆ ಹೇಳಿದ್ದಾರೆ. ಲಸಿಕೆ ಪಡೆದುಕೊಳ್ಳಬೇಕು ಮತ್ತು ಲಸಿಕೆ ಪಡೆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯಬಾರದು ಎಂಬುದನ್ನು ಈ ಪ್ರಕರಣ ಸ್ಪಷ್ಟಪಡಿಸಿದೆ ಎಂದು ಅಧ್ಯಕ್ಷರು ಹೇಳಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. ಅಧ್ಯಕ್ಷ ರಮಫೋಸರೊಂದಿಗೆ ರವಿವಾರ ಸಂಪರ್ಕದಲ್ಲಿದ್ದವರು ಲಕ್ಷಣವನ್ನು ಗಮನಿಸಬೇಕು ಅಥವಾ ಕೊರೋನ ಸೋಂಕು ಪರೀಕ್ಷೆ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News