ಅಫ್ಘಾನಿಸ್ತಾನ: ವಿದೇಶಿ ನೆರವಿಲ್ಲದ ಹೊಸ ಬಜೆಟ್ ಸಿದ್ಧಪಡಿಸಿದ ತಾಲಿಬಾನ್

Update: 2021-12-17 17:29 GMT

ಕಾಬೂಲ್, ಡಿ.17: ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ವಿತ್ತ ಸಚಿವಾಲಯ ಕರಡು ರಾಷ್ಟ್ರೀಯ ಬಜೆಟ್ ಅನ್ನು ಸಿದ್ಧಪಡಿಸಿದ್ದು 2 ದಶಕಗಳಲ್ಲಿ ಇದೇ ಪ್ರಥಮ ಬಾರಿಗೆ ವಿದೇಶದ ನೆರವಿಲ್ಲದೆ ಬಜೆಟ್ ಅನುದಾನ ರೂಪಿಸಲಾಗಿದೆ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಆರ್ಥಿಕ ಬಿಕ್ಕಟ್ಟು ಮಾನವೀಯ ದುರಂತದ ರೂಪ ತಳೆಯುವ ಭೀತಿ ಎದುರಾಗಿದ್ದು ಆ ದೇಶದಲ್ಲಿ ಹಸಿವಿನ ಹಿಮಪಾತದ ಸ್ಥಿತಿಯಿದೆ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸಿರುವ ಸಂದರ್ಭದಲ್ಲೇ ತಾಲಿಬಾನ್ ಸರಕಾರ ಹೊಸ ಬಜೆಟ್ ಸಿದ್ಧಪಡಿಸಿದೆ. 2022ರ ಡಿಸೆಂಬರ್‌ವರೆಗಿನ ಅವಧಿಯ ಬಜೆಟ್ ಇದಾಗಿದೆ . ದೇಶದ ಆದಾಯವನ್ನು ಒಟ್ಟುಗೂಡಿಸಿ ಅನುದಾನ ಒದಗಿಸಲು ಪ್ರಯತ್ನಿಸುತ್ತೇವೆ ಮತ್ತು ಇದು ಸಾಧ್ಯ ಎಂಬುದು ನಮ್ಮ ವಿಶ್ವಾಸವಾಗಿದೆ. ಆದರೆ ಸಚಿವ ಸಂಪುಟದ ಅನುಮೋದನೆ ಪಡೆದ ಬಳಿಕವಷ್ಟೇ ಬಜೆಟ್ ಕುರಿತ ಹೆಚ್ಚಿನ ವಿವರ ಒದಗಿಸುವುದಾಗಿ ವಿತ್ತ ಇಲಾಖೆಯ ವಕ್ತಾರ ಅಹ್ಮದ್ ವಾಲಿ ಹಖ್ಮಲ್ ಹೇಳಿದ್ದಾರೆ. ಸರಕಾರಿ ಉದ್ಯೋಗಿಗಳಿಗೆ ಹಲವು ತಿಂಗಳ ವೇತನ ಪಾವತಿಗೆ ಬಾಕಿಯಿದ್ದು ಇದನ್ನು ಶೀಘ್ರ ಪಾವತಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಶೀಘ್ರದಲ್ಲೇ ಸರಕಾರಿ ಉದ್ಯೋಗಿಗಳಿಗೆ ಹೊಸ ವೇತನ ಶ್ರೇಣಿ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಆಗಸ್ಟ್‌ನಲ್ಲಿ  ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಜಾಗತಿಕ ದೇಣಿಗೆದಾರರು ಅಫ್ಘಾನ್ ಗೆ ನೀಡುವ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಜತೆಗೆ, ಅಫ್ಘಾನ್ ಸರಕಾರ ಪಾಶ್ಚಿಮಾತ್ಯ ದೇಶಗಳಲ್ಲಿ ಇರಿಸಿದ್ದ ಬಿಲಿಯಾಂತರ ಡಾಲರ್ ಮೌಲ್ಯದ ಮೀಸಲು ನಿಧಿಯನ್ನು ಸ್ಥಂಭನಗೊಳಿಸಲಾಗಿದೆ.

ಈ ಹಿಂದಿನ ಸರಕಾರ ಐಎಂಎಫ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ 2021ರ ಬಜೆಟ್ನಲ್ಲಿ 219 ಬಿಲಿಯನ್ ಅಫ್ಘಾನಿ(ಆ ದೇಶದ ಕರೆನ್ಸಿ) ಮೊತ್ತದ ವಿದೇಶಿ ನೆರವು, 217 ಬಿಲಿಯನ್ ಮೊತ್ತದ ದೇಶೀಯ ಆದಾಯದ ಹೊರತಾಗಿಯೂ ಕೊರತೆ ಬಜೆಟ್ ಆಗಿತ್ತು. ಆ ಸಂದರ್ಭ ಅಫ್ಘಾನಿ ಕರೆನ್ಸಿಯ ಮುಖಬೆಲೆ 1 ಡಾಲರ್ ಎದುರು 80 ಅಫ್ಘಾನಿ ಕರೆನ್ಸಿಯಾಗಿದ್ದರೆ ಈಗ 100 ಅಫ್ಘಾನಿ ಕರೆನ್ಸಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News