×
Ad

ಬೆಥ್ಲೆಹೇಮ್: ಕೊರೋನ ಭೀತಿಯಿಂದ ಮಂಕಾದ ಕ್ರಿಸ್ಮಸ್ ಸಡಗರ

Update: 2021-12-24 23:30 IST
ಸಾಂದರ್ಭಿಕ ಚಿತ್ರ:PTI

ಬೆಥ್ಲೆಹೇಮ್,ಡಿ.24: ಕೊರೋನ ವೈರಸ್ ಸೋಂಕು ಭೀತಿಯಿಂದಾಗಿ ವಿಶ್ವದಾದ್ಯಂತ ಕ್ರಿಸ್‌ ಮಸ್ ಸಡಗರಕ್ಕೆ ಮಂಕುಬಡಿದಿದೆ. ಕ್ರೈಸ್ತ ಸಮುದಾಯದ ಪವಿತ್ರ ಕ್ಷೇತ್ರಗಳಲ್ಲೊಂದಾದ ಬೆಥ್ಲೆಹೇಮ್ ನಲ್ಲಿ ಸತತ ಎರಡನೆ ವರ್ಷವೂ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.‌ ಯೇಸುಕ್ರಿಸ್ತನ ಜನ್ಮಸ್ಥಳವಾದ ಬೆಥ್ಲೆಹೇಮ್ ನಲ್ಲಿ ಕ್ರಿಸ್‌ ಮಸ್‌ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಯಾತ್ರಿಕರು ವಿರಳ ಸಂಖ್ಯೆಯಲ್ಲಿ ಕಂಡುಬಂದಿದ್ದರು.

ಕೊರೋನ ವೈರಸ್ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಗೆ ಆಗಮಿಸುವ ಎಲ್ಲಾ ವಿದೇಶಿ ವಿಮಾನ ಯಾನವನ್ನು ನಿಷೇಧಿಸಲಾಗಿರುವುದರಿಂದ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ  ಬೆಥ್ಲೆಹೇಮ್ ಗೆ ಸತತ ಎರಡನೆ ವರ್ಷವೂ ವಿದೇಶಿ ಪ್ರಯಾಣಿಕರಿಗೆ ಆಗಮಿಸಲು ಅಸಾಧ್ಯವಾಗಿದೆ.

2021ರ ಕ್ರಿಸ್ಮಸ್ ಆಚರಣೆಯು ಕಳೆದ ವರ್ಷಕ್ಕಿಂತ ಉತ್ತಮವಾಗಿರುವುದು ಎಂಬ ಬಗ್ಗೆ ಬೆತ್ಲೆಹೇಂನ ಜನತೆ ಆಶಾವಾದ ಹೊದಿದ್ದಾರೆಂದು ನಗರದ ಮೇಯರ್ ಟೋನಿ ಸ್ಯಾಲ್ಮನ್ ತಿಳಿಸಿದ್ದಾರೆ. ಕಳೆದ ಸಲದ ಕ್ರಿಸ್‌ಮಸ್‌ನಲ್ಲಿ ಲಾಕ್‌ಡೌನ್  ನಿರ್ಬಂಧಗಳಿಂದಾಗಿ ಬಹುತೇಕ ನಾಗರಿಕರು ಮನೆಯೊಳಗೆ ಉಳಿದುಕೊಂಡಿದ್ದರು. ಈ ಸಲದ ಕ್ರಿಸ್‌ಮಸ್‌ನಂದು ಸಾಂಪ್ರದಾಯಿಕ ಪಥಸಂಚಲನ ಬ್ಯಾಂಡ್ ಪರೇಡ್ ಹಾಗೂ ಬೀದಿ ಉತ್ಸವ ಆಚರಣೆಗಳನ್ನು ನಡೆಸುವ ಉದ್ದೇಶವನ್ನು ಬೆಥ್ಲೆಹೇಮ್ ನಗರಾಡಳಿತವು ಹೊಂದಿದೆ.

‘‘ಕಳೆದ ವರ್ಷ ವರ್ಚುವಲ್ ಮೂಲಕ ಉತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಸಲ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮುಖಾಮುಖಿಯಾಗಿ ಆಚರಿಸಲಾಗುವುದು’’ ಎಂದು ಸ್ಯಾಲ್ಮನ್ ತಿಳಿಸಿದರು.
  
ಜೆರುಸಲೇಂನಲ್ಲಿನ ರೋಮನ್ ಕ್ರೈಸ್ತ ಪಂಥದ ಉನ್ನತ ಧರ್ಮಗುರು ಪಿಯರ್ ಬ್ಯಾಟಿಸ್ಟಾ ಪಿಝಾಬಾಲ್ಲಾ ಅವರು ಯೇಸುಕ್ರಿಸ್ತನ ಜನ್ಮಸ್ಥಳವೆಂದು ನಂಬಲ್ಪಡುವ ಬೆತ್ಲೆಹೇಂನ ‘ಚರ್ಚ್ ಆಫ್ ದಿ ನೇಟಿವಿಟಿ’ಯಲ್ಲಿ ಮಧ್ಯರಾತ್ರಿ ವೇಳೆ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ನಡೆಸಿಕೊಡಲಿದ್ದಾರೆ. ಬಹುತೇಕ ಫೆಲೆಸ್ತೀನಿಗಳು ಸೇರಿದಂತೆ ಸುಮಾರು 100 ಮಂದಿ ಪ್ರವಾಸಿಗರು ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರವೇಶಾವಕಾಶವನ್ನು ಪಡೆಯಲು ನಗರದ ಗಡಿಯಲ್ಲಿ ಸ್ಥಾಪಿಸಲಾಗಿರುವ ತಡೆಬೇಲಿಯ ಬಳಿ ಕಾದುನಿಂತಿರುವುದಾಗಿ ಮೂಲಗಳು ತಿಳಿಸಿವೆ. 

ಕೊರೋನ ಹಾವಳಿಗೆ ಮುನ್ನ ಕ್ರಿಸ್ಮಸ್ ಹಬ್ಬದ ವೇಳೆಗೆ ಬೆಥ್ಲೆಹೇಮ್ ಗೆ ವಿಶ್ವದಾದ್ಯಂತದಿಂದ ಯಾತ್ರಿಕರ ಮಹಾಪೂರವೇ ಹರಿದುಬರುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಬಳಿಕಯಾತ್ರಿಕರ ಸಂಖ್ಯೆ ಕ್ಷೀಣವಾಗಿದ್ದು, ಸ್ಥಳೀಯ ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಕುಸಿತದಿಂದಾಗಿ ಬೆಥ್ಲೆಹೇಮ್ ನ ಹೊಟೇಲ್‌ಗಳು, ರೆಸ್ಟಾರೆಂಟ್‌ಗಳು ಹಾಗೂ ಉಡುಗೊರೆಗಳ ಅಂಗಡಿಗಳು ಸಂಕಷ್ಟಕ್ಕೀಡಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News