×
Ad

ಕಾಬೂಲ್‌ನಿಂದ ಪಲಾಯನ ಹೊರತು ಅನ್ಯ ಆಯ್ಕೆ ಇರಲಿಲ್ಲ: ಅಫ್ಘಾನ್‌ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ

Update: 2021-12-31 23:03 IST
ಅಶ್ರಫ್ ಘನಿ

ಇಸ್ಲಾಮಾಬಾದ್, ಡಿ.31: ತಾಲಿಬಾನ್‌ಗಳು ಕಾಬೂಲನ್ನು ಸಮೀಪಿಸುತ್ತಿರುವಂತೆಯೇ, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅವರು ನಿರಾಕರಿಸಿದಾಗ ತನಗೆ ಕಾಬೂಲ್‌ನಿಂದ ಪಲಾಯನ ಹೊರತು ಅನ್ಯ ಆಯ್ಕೆ ಇರಲಿಲ್ಲ ಎಂದು ಅಫ್ಘಾನ್‌ನ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ರಾಜಧಾನಿಯಿಂದ ಹೊರತೆರಳುವ ಬಗ್ಗೆ ನಿರ್ಧರಿಸಲು ತನ್ನ ಸಲಹೆಗಾರ ಕೆಲವೇ ನಿಮಿಷಗಳ ಕಾಲಾವಕಾಶ ನೀಡಿದರು ಎಂದ ಅವರು, ಕೋಟ್ಯಂತರ ಮೊತ್ತದ ಹಣದೊಂದಿಗೆ ತಾನು ಪಲಾಯನ ಮಾಡಿದ್ದೇನೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಘನಿ ಹೇಳಿಕೆ ಗುರುವಾರ ಪ್ರಸಾರವಾಗಿದೆ.

ಆಗಸ್ಟ್ 15ರ ಮಧ್ಯಾಹ್ನ ದೇಶ ಬಿಟ್ಟು ತೆರಳಲಿದ್ದೇನೆ ಎಂಬ ಯಾವುದೇ ಕಲ್ಪನೆಯೂ ಆ ದಿನ ಬೆಳಿಗ್ಗೆ ನನ್ನಲ್ಲಿರಲಿಲ್ಲ. ಯೋಚಿಸಲು ನನಗೆ ಕೆಲ ಕ್ಷಣಗಳ ಕಾಲಾವಕಾಶ ನೀಡಲಾಗಿತ್ತು ಎಂದು ಘನಿ ಹೇಳಿದ್ದಾರೆ. ಅಧ್ಯಕ್ಷರಾಗಿದ್ದ ಘನಿ ಏಕಾಏಕಿ ದೇಶ ಬಿಟ್ಟು ತೆರಳಿದ್ದು ದೇಶದ ಜನತೆಯಲ್ಲಿ ಗೊಂದಲ, ಆತಂಕಕ್ಕೆ ಕಾರಣವಾಗಿತ್ತು. ಆದರೆ ಘನಿ ನೀಡಿರುವ ಹೇಳಿಕೆ ಈ ಮೊದಲು ಕೆಲವು ಪ್ರಮುಖರ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಈ ತಿಂಗಳ ಆರಂಭದಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಫ್ಘಾನ್‌ನ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ‘ ತಾನು ಮತ್ತು ಶಾಂತಿ ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಸರಕಾರದ ಪ್ರತಿನಿಧಿಗಳು ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸಿದಾಗ ಅವರು ಕಾಬೂಲ್‌ನ ಹೊರಭಾಗದಲ್ಲಿ ನಿಲ್ಲಲು ಒಪ್ಪಿದ್ದರು. ಆದರೆ ಮಾತುಕತೆ ಮುಂದುವರಿಸಲು ಸರಕಾರಕ್ಕೆ ಇದ್ದ ಅವಕಾಶವನ್ನು ಘನಿ ಅವರ ನಿರ್ಗಮನ ಹಾಳುಗೆಡವಿತು’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News