×
Ad

ಟಿಟಿಪಿ ವಿರುದ್ಧದ ಕಾರ್ಯಾಚರಣೆ ಸಂದರ್ಭ 4 ಪಾಕ್ ಯೋಧರ ಮೃತ್ಯು

Update: 2021-12-31 23:15 IST
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್, ಡಿ.31: ಪಾಕಿಸ್ತಾನಿ ತಾಲಿಬಾನ್ (ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್- ಟಿಟಿಪಿ) ಸಂಘಟನೆಯ ಜತೆ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ ಸೇನೆಯ 4 ಯೋಧರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಕದನ ವಿರಾಮ ಅಂತ್ಯಗೊಂಡ ಬಳಿಕ ಸೇನೆ ಹಾಗೂ ಪಾಕಿಸ್ತಾನಿ ತಾಲಿಬಾನ್ ಮಧ್ಯೆ ನಡೆದ ಅತ್ಯಂತ ಮಾರಣಾಂತಿಕ ಮುಖಾಮುಖಿ ಇದಾಗಿದೆ.

ಉತ್ತರ ವಝಿರಿಸ್ತಾನ ಪ್ರಾಂತದ ಮೀರ್‌ಆಲಿ ನಗರದಲ್ಲಿ ಬುಧವಾರ ಶಂಕಿತ ಉಗ್ರರ ಅಡಗುದಾಣದ ಮೇಲೆ ಭದ್ರತಾ ಪಡೆ ದಾಳಿ ನಡೆಸಿದಾಗ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ 4 ಯೋಧರು ಮೃತಪಟ್ಟರು. ಓರ್ವ ಭಯೋತ್ಪಾದಕನ್ನು ಬಂಧಿಸಲಾಗಿದ್ದು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ತನ್ನ ಸಂಘಟನೆಯ ಕೇಂದ್ರ ಸ್ಥಳಕ್ಕೆ ಸೇನೆ ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆದಿದ್ದು 7 ಯೋಧರು ಮೃತಪಟ್ಟಿದ್ದಾರೆ . ಸಂಘಟನೆಯ ಸದಸ್ಯರು ಗಾಯವಿಲ್ಲದೆ ಪಾರಾಗಿದ್ದಾರೆ ಎಂದು ಟಿಟಿಪಿ ವಕ್ತಾರರು ಹೇಳಿದ್ದಾರೆ. ಡಿ.31ರಂದು ಖೈಬರ್ ಪಖ್ತೂನ್‌ಖ್ವಾ ಪ್ರಾಂತದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಟಿಟಿಪಿಯ ಇಬ್ಬರು ಸದಸ್ಯರು ಹತರಾಗಿದ್ದಾರೆ ಎಂದು ಸೇನೆ ಹೇಳಿದೆ.

ಅಫ್ಘಾನ್‌ನಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರೂ ಟಿಟಿಪಿ ಪ್ರತ್ಯೇಕ ಅಸ್ತಿತ್ವ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News