ಸೋಂಕು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ: ವಿಮಾನದ ಸ್ನಾನಗೃಹದಲ್ಲಿ ಕುಳಿತು ಪ್ರತ್ಯೇಕ ಪ್ರಯಾಣಿಸಿದ ಮಹಿಳೆ

Update: 2021-12-31 18:01 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಡಿ.31: ಅಮೆರಿಕದ ಚಿಕಾಗೊ ಮತ್ತು ಐಸ್‌ಲ್ಯಾಂಡ್ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿದ್ದ ಮಹಿಳೆಯ ಕೊರೋನ ಸೋಂಕಿನ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ವಿಮಾನದ ಬಾಥ್‌ರೂಂನಲ್ಲಿ 3 ಗಂಟೆ ಪ್ರತ್ಯೇಕವಾಗಿ ಇರಿಸಿದ ಪ್ರಕರಣ ವರದಿಯಾಗಿದೆ.

ಮಿಚಿಗನ್‌ನಲ್ಲಿ ಶಿಕ್ಷಿಯಾಗಿರುವ ಮರೀಸಾ ಫೊಟಿಯೊ ಎಂಬ ಮಹಿಳೆ ಡಿ.19ರಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಂದರ್ಭ ಗಂಟಲಿನಲ್ಲಿ ಕಿರಿಕಿರಿ ಸಮಸ್ಯೆ ಕಂಡುಬಂದಾಗ ಆಕೆ ವಿಮಾನದ ಬಾಥ್‌ರೂಂಗೆ ತೆರಳಿ ಅಲ್ಲಿ ಕ್ಷಿಪ್ರ ಕೊರೋನ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವ್ ವರದಿ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಮಾನ ಪ್ರಯಾಣಕ್ಕೂ ಮುನ್ನ ತಾನು 2 ಪಿಸಿಆರ್ ಪರೀಕ್ಷೆ ಮತ್ತು 5 ಕ್ಷಿಪ್ರ ಪರೀಕ್ಷೆ ನಡೆಸಿದ್ದು ಎಲ್ಲಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು. ಆದರೆ ಸುಮಾರು ಒಂದೂವರೆ ಗಂಟೆಯ ವಿಮಾನ ಪ್ರಯಾಣದ ಬಳಿಕ ಗಂಟಲಿನಲ್ಲಿ ಸಮಸ್ಯೆ ಎದುರಾಗಿದೆ . ಆಗ ವಿಮಾನದ ಬಾಥ್‌ರೂಂನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಮಹಿಳೆ ವಿವರಿಸಿದ್ದಾರೆ. ಇವರು ಪೂರ್ಣ ಪ್ರಮಾಣದ ಲಸಿಕೆಯ ಜತೆಗೆ ಬೂಸ್ಟರ್ ಲಸಿಕೆಯನ್ನೂ ಪಡೆದಿದ್ದರು.

ಪಾಸಿಟಿವ್ ವರದಿ ಬಂದಾಗ ತಳಮಳಗೊಂಡಿದ್ದೆ. ಕೆಲವೇ ಕ್ಷಣಗಳ ಮೊದಲು ಕುಟುಂಬದ ಸದಸ್ಯರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿದ್ದ ಸಹ ಪ್ರಯಾಣಿಕರ ಆರೋಗ್ಯದ ಬಗ್ಗೆಯೂ ತನ್ನಲ್ಲಿ ತಳಮಳ ಆರಂಭವಾಯಿತು ಎಂದವರು ಹೇಳಿದ್ದಾರೆ. ಮರೀಸಾಗೆ ಇತರ ಪ್ರಯಾಣಿಕರಿಂದ ಪ್ರತ್ಯೇಕವಾದ ಆಸನ ವ್ಯವಸ್ಥೆಗೆ ಪ್ರಯತ್ನಿಸಿದೆವು. ಆದರೆ ವಿಮಾನದ ಎಲ್ಲಾ ಸೀಟು ಭರ್ತಿಯಾಗಿತ್ತು. ಆಗ ಮರೀಸಾ ಅವರೇ ಬಾಥ್‌ರೂಂನಲ್ಲಿ ಪ್ರತ್ಯೇಕವಾಗಿ ಇರುವುದಾಗಿ ಹೇಳಿದರು. ಬಳಿಕ ಬಾಥ್‌ರೂಂನ ಬಾಗಿಲಿಗೆ ‘ಔಟ್ ಆಫ್ ಸರ್ವಿಸ್’ ಎಂಬ ಚೀಟಿ ಅಂಟಿಸಿ ಅವರಿಗೆ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಯಿತು ಎಂದು ವಿಮಾನದ ಸಿಬ್ಬಂದಿ ಹೇಳಿದ್ದಾರೆ.

ಐಸ್‌ಲ್ಯಾಂಡ್ ತಲುಪಿದ ಬಳಿಕ ಮರೀಸಾ ಹಾಗೂ ಅವರ ಕುಟುಂಬ ಸದಸ್ಯರನ್ನು ಎಲ್ಲರಿಗಿಂತ ಕಡೆಗೆ ವಿಮಾನದಿಂದ ಕೆಳಗಿಳಿಸಲಾಗಿದೆ. ಅವರ ಸಹೋದರ ಮತ್ತು ತಂದೆಯಲ್ಲಿ ರೋಗಲಕ್ಷಣ ಕಂಡುಬರದ ಕಾರಣ ಅವರಿಬ್ಬರನ್ನು ಮುಂದಿನ ಪ್ರಯಾಣಕ್ಕೆ ಮುಕ್ತಗೊಳಿಸಲಾಗಿದೆ. ಮರೀಸಾರನ್ನು ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ 10 ದಿನದ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News