ಮಾಲವಿ ದೇಶದಲ್ಲಿ ಪೋಲಿಯೊ ಕಾಯಿಲೆ ಸ್ಫೋಟ

Update: 2022-02-18 18:27 GMT

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಫೆ. 18: ಆಫ್ರಿಕದ ದೇಶ ಮಾಲವಿಯಲ್ಲಿ ಪೋಲಿಯೊ ಕಾಯಿಲೆ ಸ್ಫೋಟಗೊಂಡಿದೆ ಎಂಬುದಾಗಿ ದೇಶದ ಆರೋಗ್ಯ ಅಧಿಕಾರಿಗಳು ಘೋಷಿಸಿದ್ದಾರೆ. ಮಾಲವಿ ರಾಜಧಾನಿ ಲಿಲೋಂಗ್ವೆಯಲ್ಲಿ ಚಿಕ್ಕ ಮಗುವೊಂದರಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಿದ ಬಳಿಕ ಈ ಘೋಷಣೆ ಮಾಡಲಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯೂಎಚ್‌ಒ) ಶುಕ್ರವಾರ ತಿಳಿಸಿದೆ.

ಇದು ಆಫ್ರಿಕದಲ್ಲಿ ಐದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಪತ್ತೆಯಾದ ಮೊದಲ ಪೋಲಿಯೊ ಪ್ರಕರಣವಾಗಿದೆ ಎಂದು ಡಬ್ಲ್ಯೂಎಚ್‌ಒ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಾಲವಿಯಲ್ಲಿ ಪತ್ತೆಯಾಗಿರುವ ಪೋಲಿಯೊ ಪ್ರಭೇದವು ಪಾಕಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪೋಲಿಯೊ ಪ್ರಭೇದದೊಂದಿಗೆ ನಂಟು ಹೊಂದಿದೆ ಎನ್ನುವುದನ್ನು ಪ್ರಾಯೋಗಿಕ ವಿಶ್ಲೇಷಣೆಯು ತೋರಿಸಿದೆ. ಪಾಕಿಸ್ತಾನದಲ್ಲಿ ಪೋಲಿಯೊ ಕಾಯಿಲೆಯು ಈಗಲೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ.

‘‘ಇದು ಪಾಕಿಸ್ತಾನದಿಂದ ಬಂದಿರುವ ಪ್ರಕರಣವಾಗಿದೆ. ಹಾಗಾಗಿ, ಪೋಲಿಯೊ ಮುಕ್ತ ವಲಯ ಎಂಬ ಆಫ್ರಿಕದ ಸ್ಥಾನಮಾನವನ್ನು ಈ ಪ್ರಕರಣ ಬದಲಿಸುವುದಿಲ್ಲ’’ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪೋಲಿಯೊ ಹರಡುವುದನ್ನು ತಡೆಯಲು ತಾನು ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News