ಜನರನ್ನು ಒಂಟಿಯನ್ನಾಗಿಸಿದ ಕೋವಿಡ್ ಲಾಕ್ಡೌನ್: ಬ್ರಿಟನ್ ನ ಸಮೀಕ್ಷೆಯ ವರದಿ

Update: 2022-03-23 17:48 GMT

ಲಂಡನ್, ಮಾ.23: ಕೋವಿಡ್-19 ಸೋಂಕಿನ ಕಾರಣದಿಂದ ಜಾರಿಗೊಂಡ 2 ವರ್ಷದ ಲಾಕ್ಡೌನ್ ಜನರನ್ನು ಒಬ್ಬಂಟಿಯನ್ನಾಗಿಸಿತು ಮತ್ತು ಪರದೆಗಳ(ಟಿವಿ ಅಥವಾ ಸ್ಮಾರ್ಟ್‌ಫೋನ್) ಚಟಕ್ಕೆ ಉತ್ತೇಜನ ನೀಡಿ ನಮ್ಮ ನಿದ್ರೆಯ ವ್ಯವಸ್ಥೆಗೆ ಅಡ್ಡಿಪಡಿಸಿದೆ ಎಂದು ಬ್ರಿಟನ್‌ನ ಐಪ್‌ಸೋಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಬ್ರಿಟನ್ ನಲ್ಲಿ ಮಾರ್ಚ್ 4 ರಿಂದ 7ರವರೆಗಿನ ಅವಧಿಯಲ್ಲಿ 16 ವರ್ಷ ಮೀರಿದ 1,229 ಜನರನ್ನು ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 50% ಮಂದಿಗೆ ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ ಎಂಬ ಭೀತಿಯಿದೆ. ಇನ್ನು ಕೆಲವರು, ಕೊರೋನ ಸಾಂಕ್ರಾಮಿಕಕ್ಕೂ ಹಿಂದೆ ಇದ್ದ ಪರಿಸ್ಥಿತಿ ಮತ್ತೆಂದೂ ಮರುಕಳಿಸದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪೋಸ್ ಸಂಸ್ಥೆ ಮತ್ತು ಲಂಡನ್‌ನ ಕಿಂಗ್ಸ್‌ ಕಾಲೇಜಿನ ಕಾರ್ಯನೀತಿ ಸಂಸ್ಥೆ ಜಂಟಿಯಾಗಿ ಈ ಸಮೀಕ್ಷೆ ನಡೆಸಿದೆ.

ಲಾಕ್‌ಡೌನ್‌ನಿಂದಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಕುಸಿದಿದೆ ಎಂದು ಮೂವರಲ್ಲಿ ಒಬ್ಬರು ಅಭಿಪ್ರಾಯಪಟ್ಟರೆ, ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸಿದೆ ಎಂದು ನಾಲ್ವರಲ್ಲಿ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ದೈಹಿಕ , ಮಾನಸಿಕ ಆರೋಗ್ಯ ಕುಸಿದಿದೆ ಎಂದು ಹೇಳಿದವರಲ್ಲಿ ಮಹಿಳೆಯರ ಸಂಖ್ಯೆ 38% ಆಗಿದ್ದರೆ ಪುರುಷರ ಸಂಖ್ಯೆ 28% ಆಗಿದೆ.

ಸಾಂಕ್ರಾಮಿಕದ ಬಳಿಕ ಪರದೆಯನ್ನು ವೀಕ್ಷಿಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 50% ಜನ ಹೇಳಿದ್ದಾರೆ. ಸಾಂಕ್ರಾಮಿಕದ ಕುರಿತ ಸುದ್ಧಿಗಾಗಿಯೇ ಕನಿಷ್ಟ ದಿನಕ್ಕೊಮ್ಮೆಯಾದರೂ ಸಾಮಾಜಿಕ ಮಾಧ್ಯಮವನ್ನು ವೀಕ್ಷಿಸುತ್ತಿದ್ದೆವು ಎಂದು 46% ಮಂದಿ ಹೇಳಿದ್ದರೆ, ಇದರಲ್ಲಿ 7% ಮಂದಿ ಪ್ರತೀ ಗಂಟೆಗೊಮ್ಮೆ ಸಾಮಾಜಿಕ ಮಾಧ್ಯಮ ವೀಕ್ಷಿಸುತ್ತಿದ್ದಾಗಿ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News