ಕೀವ್ ಬಳಿ 1,200 ಮೃತದೇಹ ಪತ್ತೆ: ಉಕ್ರೇನ್ ಹೇಳಿಕೆ

Update: 2022-04-11 18:41 GMT

 ಕೀವ್, ಎ.11: ಉಕ್ರೇನ್ನ ಹಲವೆಡೆ ನಾಗರಿಕರ ಮೃತದೇಹ ಮತ್ತು ಸಾಮೂಹಿಕ ಸಮಾಧಿ ಪತ್ತೆಯಾಗಿರುವುದು ರಶ್ಯದ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ . ಕೀವ್ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ 1,200ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿವೆ ಎಂದು ಉಕ್ರೇನ್ ಹೇಳಿದೆ.

   ಕ್ರಮಟೊರೊಸ್ಕ್ ರೈಲು ನಿಲ್ದಾಣದ ಮೇಲಿನ ಕ್ಷಿಪಣಿ ದಾಳಿಯಲ್ಲಿ 52 ನಾಗರಿಕರು ಮೃತಪಟ್ಟಿದ್ದಾರೆ. ಕೇಂದ್ರ ಉಕ್ರೇನ್ನ ನಿಪ್ರೊ ನಗರದಲ್ಲಿರುವ ವಿಮಾನ ನಿಲ್ದಾಣ ರಶ್ಯ ಸೇನೆ ಹೊಸದಾಗಿ ನಡೆಸಿದ ವಾಯುದಾಳಿಯಲ್ಲಿ ವಿಮಾನ ನಿಲ್ದಾಣ, ಅದರ ಸುತ್ತಲಿನ ಮೂಲಸೌಕರ್ಯಗಳು ಧ್ವಂಸಗೊಂಡಿದೆ. ದಾಳಿಯಲ್ಲಿ ನಾಗರಿಕರ ಸಾವು ನೋವಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನಿಪ್ರೊ ನಗರದ ಸೇನಾನೆಲೆಯ ಮುಖ್ಯಸ್ಥ ವ್ಯಲೆಂಟಿನ್ ರೆಝ್ನಿಚೆಂಕೊ ಹೇಳಿದ್ದಾರೆ. ಈಶಾನ್ಯದ ಖಾರ್ಕಿವ್ನಲ್ಲಿ ರವಿವಾರ ರಶ್ಯ ಸೇನೆಯ ವಾಯುದಾಳಿಯಲ್ಲಿ 2 ಮಂದಿ ಮೃತರಾಗಿದ್ದಾರೆ. ಇದೇ ನಗರದ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಒಂದು ಮಗುವಿನ ಸಹಿತ 10 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ.

ರಶ್ಯದ ಸೇನೆ ರಣತಂತ್ರ ಬದಲಿಸಿದ್ದು ಉಕ್ರೇನ್ನ ಪೂರ್ವದಲ್ಲಿ ಬೃಹತ್ ಆಕ್ರಮಣ ಎಸಗಲು ಸನ್ನದ್ಧವಾಗಿದೆ. ದೇಶದ ಪಾಲಿಗೆ ಮುಂದಿನ ಕೆಲ ದಿನಗಳು ನಿರ್ಣಾಯಕವಾಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ

  ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಇನ್ನಷ್ಟು ಕ್ಷಿಪಣಿ ದಾಳಿ ನಡೆಯಲಿದೆ ಎಂದು ಎಚ್ಚರಿಸಿದರು. ಇದೇ ಸಂದರ್ಭ ರಶ್ಯದ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರಿಸಿದ ಅವರು, ಜನತೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು, ಕ್ಷಮೆ ಯಾಚಿಸಲು ನಿರಾಕರಿಸಿದರೆ ಅವರು ರಾಕ್ಷಸರಾಗುತ್ತಾರೆ. ಆಗ ವಿಶ್ವ ಅವರನ್ನು ತಿರಸ್ಕರಿಸುತ್ತದೆ. ಆದರೆ ಜಗತ್ತು ತಮ್ಮೊಂದಿಗೆ ಹೊಂದಿಕೊಳ್ಳಬೇಕು ಎಂದು ಆ ರಾಕ್ಷಸರು ಬಯಸುತ್ತಾರೆ ಎಂದು ಟೀಕಿಸಿದರು. ಈ ಮಧ್ಯೆ, ಉಕ್ರೇನ್ ದೊಡ್ಡ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಝೆಲೆನ್ಸ್ಕಿ ಅವರ ಸಲಹೆಗಾರ ಮಿಖಾಯ್ಲಿ ಪೊಡೊಲ್ಯಾಕ್ ರವಿವಾರ ಹೇಳಿದ್ದಾರೆ. ಡೊನ್ಬಾಸ್ ಪ್ರಾಂತ ಸೇರಿದಂತೆ ಅವರ ವಿರುದ್ಧ ನಾವು ಗೆಲ್ಲಬೇಕು, ಆಗ ನಮಗೆ ಶಾಂತಿ ಮಾತುಕತೆಯ ಸಂದರ್ಭ ಅಧಿಕಾರದಿಂದ ಮಾತನಾಡಲು ಸಾಧ್ಯವಾಗಲಿದೆ ಎಂದವರು ಹೇಳಿದ್ದಾರೆ.

 ಕಳೆದ ಒಂದೂವರೆ ತಿಂಗಳಿಂದ ರಶ್ಯ ಸೇನೆಯ ಮುತ್ತಿಗೆಗೆ ಒಳಗಾಗಿರುವ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನಲ್ಲಿನ 90%ದಷ್ಟು ಮೂಲಸೌಕರ್ಯಗಳು ರಶ್ಯ ದಾಳಿಯಲ್ಲಿ ಹಾನಿಗೀಡಾಗಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್ನಲ್ಲಿ ಎಸಗಿದ ಸಾಮೂಹಿಕ ದೌರ್ಜನ್ಯಕ್ಕೆ ರಶ್ಯವನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯನಿರ್ವಹಿಸುವುದಾಗಿ ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲಿವನ್ ಹೇಳಿದ್ದಾರೆ. ಉಕ್ರೇನ್ನಲ್ಲಿ ಶೀಘ್ರ ಕದನ ವಿರಾಮ ಜಾರಿಗೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News