ಇರಾಕ್ ನ ಕುರ್ಡಿಶ್ ಬಂಡುಗೋರರ ವಿರುದ್ಧ ಮತ್ತೆ ದಾಳಿ ಆರಂಭಿಸಿದ ಟರ್ಕಿ

Update: 2022-04-18 18:11 GMT

ಅಂಕಾರ, ಎ.18: ಉತ್ತರ ಇರಾಕ್ನಲ್ಲಿ ಕುರ್ಡಿಶ್ ಬಂಡುಗೋರರ ವಿರುದ್ಧ ಟರ್ಕಿಯು ಹೊಸದಾಗಿ ವಾಯು ಮತ್ತು ನೆಲದ ಮೇಲಿಂದ ದಾಳಿ ಆರಂಭಿಸಿದೆ ಎಂದು ಟರ್ಕಿಯ ರಕ್ಷಣಾ ಸಚಿವ ಹುಲುಸಿ ಅಕರ್ ಹೇಳಿದ್ದಾರೆ. ಕಮಾಂಡೊ ಘಟಕ, ವಿಶೇಷ ಕಾರ್ಯಪಡೆ, ದಾಳಿ ನಡೆಸುವ ಹೆಲಿಕಾಪ್ಟರ್ಗಳು ಮಾನವ ರಹಿತ ವೈಮಾನಿಕ ವಾಹನಗಳ ಮೂಲಕ ಉತ್ತರ ಇರಾಕ್ನ ಮೆಟಿನಾ, ಝಾಪ್ ಮತ್ತು ಅವಶಿನ್-ಬಾಸ್ಯನ್ ವಲಯದಲ್ಲಿರುವ ಕುರ್ಡಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ)ಯ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ಆರಂಭಿಸಲಾಗಿದೆ. ಟರ್ಕಿಯ ವಿರುದ್ಧ ಪಿಕೆಕೆ ಬೃಹತ್ ಪ್ರಮಾಣದ ದಾಳಿಗೆ ಕಾರ್ಯತಂತ್ರ ರೂಪಿಸಿರುವ ಮಾಹಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದವರು ಸೋಮವಾರ ಹೇಳಿದ್ದಾರೆ.

 ಇರಾಕ್ನ ಸ್ವಾಯತ್ತ ಕುರ್ಡಿಶ್ ಪ್ರದೇಶದ ಪ್ರಧಾನಿ ಮಸ್ರೂರ್ ಬರ್ಝಾನಿ ಟರ್ಕಿಗೆ ಭೇಟಿ ನೀಡಿ ಟರ್ಕಿಯ ಅಧ್ಯಕ್ಷ ರಿಸೆಪ್ ಎರ್ಡೋಗನ್ ಜತೆ ಮಾತುಕತೆ ನಡೆಸಿದ 2 ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಉತ್ತರ ಇರಾಕ್ನಲ್ಲಿ ಭದ್ರತೆ ಮತ್ತು ಸ್ಥಿರತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಹಕಾರ ಸಂಬಂಧವನ್ನು ವೃದ್ಧಿಸಲು ಉಭಯ ಮುಖಂಡರೂ ನಿರ್ಧರಿಸಿದ್ದಾರೆ ಎಂದು ಸಭೆಯ ಬಳಿಕ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಟರ್ಕಿಯ ಗಡಿಭಾಗದಲ್ಲಿರುವ ಕುರ್ಡಿಶ್ ವಲಯದಲ್ಲಿ ಸಕ್ರಿಯವಾಗಿರುವ ಪಿಕೆಕೆ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಟರ್ಕಿ ಹಾಗೂ ಪಾಶ್ಚಿಮಾತ್ಯ ದೇಶಗಳು ಹೆಸರಿಸಿವೆ. 2020ರಲ್ಲೂ ಟರ್ಕಿ ಸೇನೆ ಕುರ್ಡಿಶ್ ಬಂಡುಗೋರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News