ಅಫ್ಗಾನ್ ಮಸೀದಿಯಲ್ಲಿ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 33ಕ್ಕೆ ಏರಿಕೆ; ತಾಲಿಬಾನ್ ಹೇಳಿಕೆ

Update: 2022-04-23 20:54 GMT

ಕಾಬೂಲ್, ಎ.23: ಉತ್ತರ ಅಫ್ಗಾನಿಸ್ತಾನದಲ್ಲಿ ಮಸೀದಿ ಹಾಗೂ ಧಾರ್ಮಿಕ ಶಾಲೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 33ಕ್ಕೇರಿದೆ ಎಂದು ತಾಲಿಬಾನ್ ಮುಖಂಡರು ಹೇಳಿದ್ದಾರೆ.

ಉತ್ತರದ ಕುಂದುರ್ ಪ್ರಾಂತದ ಇಮಾಮ್ ಸಾಹೆಬ್ ನಗರದಲ್ಲಿನ ಮಸೀದಿ ಹಾಗೂ ಶಾಲೆಯನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದು ಇತರ 43 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ದೇಶದ್ರೋಹಿಗಳು ಮತ್ತು ದುಷ್ಟಶಕ್ತಿಗಳು ಈ ದಾಳಿಯ ಸೂತ್ರಧಾರರಾಗಿದ್ದು ದಾಳಿಯನ್ನು ಖಂಡಿಸುತ್ತೇವೆ ಎಂದು ಅಫ್ಗಾನ್‌ನ ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯದ ಸಹಾಯಕ ಸಚಿವ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಶುಕ್ರವಾರ ನಡೆದ ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ವಹಿಸಿಕೊಂಡಿಲ್ಲ. ಆದರೆ ದಾಯಶ್ ಉಗ್ರರ ಸಂಘಟನೆ ಗುರುವಾರ ಅಫ್ಗಾನ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಶುಕ್ರವಾರದ ದಾಳಿಯ ಹಿಂದೆಯೂ ಈ ಸಂಘಟನೆಯ ಕೈವಾಡವಿದೆ ಎಂದು ಅಫ್ಗಾನ್ ಅಧಿಕಾರಿಗಳು ಶಂಕಿಸಿದ್ದಾರೆ.

ಅಫ್ಗಾನ್‌ನಲ್ಲಿ ಮಸೀದಿ ಮತ್ತು ಧಾರ್ಮಿಕ ಶಾಲೆಯನ್ನು ಗುರಿಯಾಗಿಸಿ ನಡೆದಿರುವ ಬಾಂಬ್ ದಾಳಿ ‘ಭಯಾನಕ’ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಗಾನ್‌ನಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ನಿಲ್ಲಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಫ್ಗಾನಿಸ್ತಾನಕ್ಕೆ ವಿಶ್ವಸಂಸ್ಥೆಯ ವಿಶೇಷ ಸಹಪ್ರತಿನಿಧಿ ರಮೀರ್ ಅಲಕ್‌ಬರೊವ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News