×
Ad

ಚೀನಾದಿಂದ ಪರಮಾಣು ಶಕ್ತ ಸಬ್ಮೆರಿನ್ ನಿರ್ಮಾಣ ಉಪಗ್ರಹದ ಚಿತ್ರದಿಂದ ಮಾಹಿತಿ

Update: 2022-05-10 23:46 IST
Editor : Saleeth Sufiyan
PHOTO:REUTERS

ಬೀಜಿಂಗ್, ಮೇ 10: ಚೀನಾದ ನೌಕಾನೆಲೆಯಲ್ಲಿ , ಅತ್ಯಾಧುನಿಕ ಪರಮಾಣು ಶಕ್ತ ಸಬ್‌ಮೆರಿನ್ ನೆಲೆಗೊಳಿಸಿರುವುದನ್ನು ಇತ್ತೀಚೆಗೆ ಉಪಗ್ರಹಗಳು ರವಾನಿಸಿದ ಚಿತ್ರಗಳು ದೃಢಪಡಿಸಿವೆ ಎಂದು ಮಿಲಿಟರಿ ವಿಶ್ಲೇಷಕರು ವರದಿ ಮಾಡಿದ್ದಾರೆ. ಚೀನಾದ ಲಿಯಾನಿಂಗ್ ಪ್ರಾಂತದ ಹುಲುದಾವೊ ಬಂದರಿನಲ್ಲಿ ಈ ಸಬ್‌ಮೆರಿನ್ ನೆಲೆಗೊಳಿಸಿರುವುದನ್ನು ಉಪಗ್ರಹದ ಚಿತ್ರ ತೋರಿಸಿದ್ದು ದಾಳಿ ನಡೆಸುವ ಸಾಮರ್ಥ್ಯದ ಈ ಸಬ್‌ಮೆರಿನ್ ಹೊಸ ಮಾದರಿಯಾಗಿದೆಯೇ ಅಥವಾ ಹಾಲಿ ಸಬ್‌ಮೆರಿನ್  ಅನ್ನು ನವೀಕರಿಸಿ ಮೇಲ್ದರ್ಜೆಗೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಉಪಗ್ರಹ ಚಿತ್ರ ಒದಗಿಸುವ ಖಾಸಗಿ ಸಂಸ್ಥೆ ಪ್ಲಾನೆಟ್ ಲ್ಯಾಬ್ಸ್ ಈ ಚಿತ್ರವನ್ನು ಒದಗಿಸಿದೆ . ಎಪ್ರಿಲ್ 24ರಿಂದ ಮೇ 4ರ ನಡುವಿನ ಅವಧಿಯಲ್ಲಿ ಈ ಸಬ್‌ಮೆರಿನ್ ಅನ್ನು ನೀರಿನಿಂದ ಹೊರಸಾಗಿಸಿ ಬಂದರಿನಲ್ಲಿ ನೆಲೆಗೊಳಿಸಲಾಗಿದೆ ಎಂದು ರಾಯ್ಟರ್ ವರದಿ ಮಾಡಿದೆ.

 ಚೀನಾದ ನೌಕಾಸೇನೆ ಮುಂದಿನ ಕೆಲ ವರ್ಷದಲ್ಲಿ ಹೊಸ, ಆಕ್ರಮಣ ಎಸಗಬಲ್ಲ , ಕ್ರೂಸ್ ಕ್ಷಿಪಣಿ ಉಡಾವಣಾ ವ್ಯವಸ್ಥೆ ಹೊಂದಿರುವ ಸಬ್‌ಮೆರಿನ್  ನಿರ್ಮಿಸಲಿದೆ ಎಂದು ಕಳೆದ ನವೆಂಬರ್ ನಲ್ಲಿ ಅಮೆರಿಕದ ರಕ್ಷಣಾ ವಿಭಾಗ ವರದಿ ಮಾಡಿದೆ.ಮಾರ್ಗದರ್ಶಿ ಕ್ಷಿಪಣಿಗಳಿಗಾಗಿ ಲಂಬ ಉಡಾವಣಾ ಟ್ಯೂಬ್ ಗಳನ್ನು ಹೊಂದಿರುವ ನೂತನಶ್ರೇಣಿಯ 093 ‘ಹಂಟರ್-ಕಿಲ್ಲರ್’ ಸಬ್‌ಮೆರಿನ್  ನಿರ್ಮಿಸಲು ಚೀನಾ ಈ ಹಿಂದೆಯೇ ನಿರ್ಧರಿಸಿತ್ತು. ಆದರೆ ಇದೀಗ ಉಪಗ್ರಹಗಳಿಂದ ಲಭ್ಯವಾಗಿರುವ ಫೋಟೋ ಮೂಲಕ ಸಬ್‌ಮೆರಿನ್  ಅನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದು . ಬಹುಷಃ ಇದು ಮತ್ತೊಂದು ಸಬ್‌ಮೆರಿನ್  ಆಗಿರಬಹುದು ಎಂದು ಸಿಂಗಾಪುರ ಮೂಲದ ಭದ್ರತಾ ತಜ್ಞ ಕಾಲಿನ್ ಕೋಹ್ ಹೇಳಿದ್ದಾರೆ. ಲಂಬ ಉಡಾವಣಾ ಟ್ಯೂಬ್‌ಗಳನ್ನು ಚೀನಾದ ಹಂಟರ್ ಕಿಲ್ಲರ್ ಸಬ್‌ಮೆರಿನ್  ತುಕಡಿಗೆ ಮಾರ್ಗದರ್ಶಿ ಕ್ಷಿಪಣಿಯ ಸಹಿತ ಹೆಚ್ಚಿನ ನಮ್ಯತೆ(ಫ್ಲೆಕ್ಸಿಬಿಲಿಟಿ) ಒದಗಿಸಲಿದೆ ಎಂದವರು ಹೇಳಿದ್ದಾರೆ.

ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮೆರಿನ್‌ಗಳು ಮತ್ತು ಚೀನಾ ನೌಕಾಪಡೆಯ ವಿಮಾನವಾಹಕ ನೌಕೆಯ ತುಕಡಿಗಳ ರಕ್ಷಣೆ ಜೊತೆಗೆ ಶತ್ರುಗಳ ನೌಕೆಯನ್ನು ಪತ್ತೆಹಚ್ಚುವ ಕಾರ್ಯವನ್ನು ಚೀನಾದ ದಾಳಿ ಸಬ್‌ಮೆರಿನ್ ನಿರ್ವಹಿಸಲಿದೆ. ಇದೀಗ ಉಪಗ್ರಹ ರವಾನಿಸಿರುವ ಚಿತ್ರಗಳು ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಕಾರಣವಾಗಿದೆ. ಇವು ಹೊಸ ಸಬ್‌ಮೆರಿನ್ ಆಗಿರುವ ಸಾಧ್ಯತೆಯೂ ಇದೆ ಎಂದು ‘ಮಿಡ್ಲ್‌ಬರಿ ಇನ್‌ಸ್ಟಿಟ್ಯೂಟ್  ಆಫ್ ಇಂಟರ್ನ್ಯಾಷನಲ್ ಸ್ಟಡೀಸ್’ನ ಪ್ರೊಫೆಸರ್ ಜೆಫ್ರೀ ಲಿವಿಸ್ ಹೇಳಿದ್ದಾರೆ.

Writer - Saleeth Sufiyan

Audience Development & Tech

Editor - Saleeth Sufiyan

Audience Development & Tech

Similar News