ಉ.ಕೊರಿಯಾ: ಕೋವಿಡ್ ಸೋಂಕು ಉಲ್ಬಣ, ಔಷಧ ವಿತರಣೆಗೆ ಸೇನೆ ನಿಯೋಜನೆ

Update: 2022-05-16 18:14 GMT

ಪೋಂಗ್ಯಾಂಗ್, ಮೇ 16: ದೇಶದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದ್ದು ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತರಾಟೆಗೆತ್ತಿಕೊಂಡಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ಔಷಧ ವಿತರಣೆಗೆ ಸೇನೆಯನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಕೆಸಿಎನ್ಎ ವರದಿ ಮಾಡಿದೆ.

ನಿಗೂಢ ಜ್ವರದಿಂದ ಮಿಲಿಯನ್ಗೂ ಅಧಿಕ ಮಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಜಾರಿ ಸಹಿತ ಹಲವು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ಆರೋಗ್ಯಸೇವಾ ವಿಭಾಗದ ಸಿಬಂದಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲರಾಗಿದ್ದಾರೆ. ದೇಶದೆಲ್ಲೆಡೆ 24 ಗಂಟೆಯೂ ಮೆಡಿಕಲ್ ಶಾಪ್ ತೆರೆದಿಡಬೇಕು ಎಂಬ ಆದೇಶ ಪಾಲನೆಯಾಗುತ್ತಿಲ್ಲ ಎಂದು ಅಧ್ಯಕ್ಷ ಕಿಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಅಲ್ಲದೆ, ದೇಶದ ಪ್ರಪ್ರಥಮ ಕೋವಿಡ್ ಸೋಂಕು ಪ್ರಕರಣ ವರದಿಯಾದ ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ಔಷಧ ಪೂರೈಕೆಯನ್ನು ತಕ್ಷಣವೇ ಸ್ಥಿರಗೊಳಿಸಲು ಕ್ರಮ ಕೈಗೊಳ್ಳುವಂತೆ ಸೇನೆಗೆ ಆದೇಶಿಸಿದರು ಎಂದು ವರದಿಯಾಗಿದೆ.

ನಿಗೂಢ ಜ್ವರದಿಂದಾಗಿ ಮೇ 15ರವರೆಗೆ ದೇಶದಲ್ಲಿ 50 ಮಂದಿ ಮೃತಪಟ್ಟಿದ್ದು 1 ಮಿಲಿಯಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ . 5 ಲಕ್ಷದಷ್ಟು ಮಂದಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಸಿಎನ್ಎ ವರದಿ ಹೇಳಿದೆ.ಈ ಮಧ್ಯೆ, ಉತ್ತರ ಕೊರಿಯಾ ಜನತೆಗೆ ಅಗತ್ಯದ ನೆರವು ಒದಗಿಸುವುದನ್ನು ತಾನು ತಡೆಹಿಡಿಯುವುದಿಲ್ಲ. ಉತ್ತರ ಕೊರಿಯಾ ಅಧಿಕಾರಿಗಳು ಒಪ್ಪಿದರೆ ಕೋವಿಡ್ ಔಷಧ, ಆರೋಗ್ಯ ಸೇವಾ ಸಿಬಂದಿ ಸಹಿತ ಅಗತ್ಯದ ನೆರವು ಒದಗಿಸಲು ಹಿಂಜರಿಯುವುದಿಲ್ಲ ಎಂದು ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಸೋಮವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News