ಉಲ್ಬಣಿಸುತ್ತಿರುವ 'ಮಂಕಿಪಾಕ್ಸ್' ಪ್ರಕರಣ: ಅಮೆರಿಕ, ಯುರೋಪ್ ನಲ್ಲಿ ಮತ್ತಷ್ಟು ಪ್ರಕರಣ ಪತ್ತೆ

Update: 2022-05-20 18:10 GMT
monkeypox

ವಾಷಿಂಗ್ಟನ್, ಮೇ 20: ಜಗತ್ತು ಕೋವಿಡ್ ಸೋಂಕಿನಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿರುವಂತೆಯೇ ಸಾಮಾನ್ಯವಾಗಿ ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಮಂಕಿಪಾಕ್ಸ್ ಎಂಬ ವೈರಲ್ ಕಾಯಿಲೆಯು ಏಕಾಏಕಿಯಾಗಿ ಅಮೆರಿಕ ಮತ್ತು ಯುರೋಪ್‌ಗೆ ವಿಸ್ತರಿಸಿದೆ ಎಂದು ವರದಿಯಾಗಿದೆ.
ಮಂಕಿಪಾಕ್ಸ್ ಎಂಬುದು ಸಿಡುಬು ರೋಗವನ್ನು ಹೋಲುವ ಸಾಂಕ್ರಾಮಿಕ ಕಾಯಿಲೆಯಾಗಿದೆ.

ಅಮೆರಿಕದ ಮ್ಯಸಚೂಸೆಟ್ಸ್‌ನಲ್ಲಿ  ಬುಧವಾರ ಮಂಕಿಪಾಕ್ಸ್ ನ ಒಂದು ಪ್ರಕರಣ ಪತ್ತೆಯಾಗಿದ್ದು ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣಿಸಿದ್ದ ವ್ಯಕ್ತಿಯಲ್ಲಿ ಈ ಸೋಂಕಿನ ಲಕ್ಷಣಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆಯೇ ಯುರೋಪ್ ನಲ್ಲಿ ಸೋಂಕು ಉಲ್ಬಣಿಸುವ ಆತಂಕ ಹೆಚ್ಚಿದ್ದು ಕೆನಡಾದ ಕ್ವಿಬೆಕ್ ಪ್ರಾಂತದಲ್ಲಿ 12ಕ್ಕೂ ಅಧಿಕ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ ಸೋಂಕು ಸತತ ಮೂರನೇ ವರ್ಷವೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಮಧ್ಯೆಯೇ, ಸಾಮಾನ್ಯವಾಗಿ ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಮಂಕಿಪಾಕ್ಸ್ ಯುರೋಪ್‌ಗೆ ವ್ಯಾಪಿಸಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಫ್ರಿಕಾ ಖಂಡಕ್ಕೆ ಪ್ರಯಾಣಿಸದವರಲ್ಲೂ ಸೋಂಕು ಕಾಣಿಸಿಕೊಂಡಿರುವುದರಿಂದ ಮಂಕಿಪಾಕ್ಸ್ ಸೋಂಕುಪೀಡಿತರ ಪ್ರಯಾಣ ದಾಖಲೆ ಮತ್ತು ಸಂಪರ್ಕ ಜಾಡನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದ ಶುಕ್ರವಾರದ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ:
 ಸ್ಪೇನ್ ನಲ್ಲಿ ಗುರುವಾರದ ವರೆಗೆ 14 ಸೋಂಕು ಪ್ರಕರಣ ಪತ್ತೆ. ಎಲ್ಲಾ ಪ್ರಕರಣಗಳೂ ಮ್ಯಾಡ್ರಿಡ್ ನಗರದಲ್ಲಿ ಪತ್ತೆಯಾಗಿದ್ದು ಇತರ 22 ಶಂಕಿತ ಪ್ರಕರಣ ದಾಖಲಾಗಿದೆ. ಇದುವರೆಗೆ ಪತ್ತೆಯಾದ ಎಲ್ಲಾ ಪ್ರಕರಣಗಳೂ ಸೌಮ್ಯ ಲಕ್ಷಣದ ಪ್ರಕರಣಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೋರ್ಚುಗಲ್ ನಲ್ಲಿ 14 ಪ್ರಕರಣ ಪತ್ತೆಯಾಗಿದ್ದು ಎಲ್ಲಾ ಪ್ರಕರಣಗಳೂ ರಾಜಧಾನಿ ಲಿಸ್ಬನ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

.
ಬ್ರಿಟನ್‌ನಲ್ಲಿ ಗುರುವಾರದ ವರೆಗೆ 9 ಸೋಂಕು ಪ್ರಕರಣ ಪತ್ತೆಯಾಗಿದೆ.  ರೋಮ್‌ನಲ್ಲಿ  ಒಂದು ಪ್ರಕರಣ ಪತ್ತೆಯಾಗಿದ್ದು ಸೋಂಕಿತ ವ್ಯಕ್ತಿ ಇತ್ತೀಚೆಗೆ ಸ್ಪೇನ್‌ನ ಕ್ಯಾನರಿ  ದ್ವೀಪಕ್ಕೆ ಭೇಟಿ ನೀಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ವೀಡನ್‌ನಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ.
 ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ತಲಾ ಒಂದು, ಬೆಲ್ಜಿಯಂನಲ್ಲಿ 2 ಪ್ರಕರಣ ಪತ್ತೆಯಾಗಿದೆ. ಆಸ್ಟ್ರೇಲಿಯಾದಲ್ಲೂ ಒಂದು ಶಂಕಿತ ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಈ ರೋಗವು ಆಫ್ರಿಕಾ ಖಂಡಕ್ಕೆ ಪ್ರಯಾಣಿಸದವರಲ್ಲೂ ಹರಡುತ್ತಿದೆ ಮತ್ತು ಹೆಚ್ಚಾಗಿ ಯುವಜನರಲ್ಲಿ ಕಂಡು ಬರುತ್ತಿದೆ. ಆದರೆ ಇದರಿಂದ ಜನಸಾಮಾನ್ಯರಿಗೆ ಅಪಾಯ ಕಡಿಮೆ ಎಂದು ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ. 1958ರಲ್ಲಿ ಈ ಸಾಂಕ್ರಾಮಿಕವನ್ನು ವಿಜ್ಞಾನಿಗಳು ಪ್ರಥಮ ಬಾರಿಗೆ ಪತ್ತೆಹಚ್ಚಿದ್ದರು. ಸಂಶೋಧನೆಗೆ ಬಳಸಲಾಗಿದ್ದ ಕೋತಿಗಳಲ್ಲಿ ಸಿಡುಬನ್ನು ಹೋಲುವ ಈ ಹೊಸ ಸೋಂಕು ಕಂಡುಬಂದಿದ್ದರಿಂದ ಅದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ.

ಏನಿದು ಮಂಕಿಪಾಕ್ಸ್?:
 
ಸಿಡುಬು ರೋಗವನ್ನು ಹೋಲುವ ಕಾಯಿಲೆಯಿದು. ಇದು ಸಾಂಕ್ರಾಮಿಕ ರೋಗವಾಗಿದ್ದು ಜ್ವರ, ಶೀತ, ತಲೆನೋವು, ನಿಶ್ಯಕ್ತಿ ಇತ್ಯಾದಿ ಫ್ಲೂ ರೀತಿಯ ಲಕ್ಷಣಗಳನ್ನು ಹೊಂದಿದೆ. ಮುಖ ಮತ್ತು ದೇಹದ ಭಾಗಗಳಲ್ಲಿ ಸಿಡುಬಿನ ರೀತಿಯ ಗಾಯಗಳು ಮೂಡುತ್ತವೆ. ಈ ವೈರಸ್ ರೋಗವು ಬಾಚಿಹಲ್ಲು ಇರುವ ದಂಶಕಗಳಂತಹ ಕಾಡು ಪ್ರಾಣಿಗಳಲ್ಲಿ ಕಾಣಿಸಿಕೊಂಡು ಕ್ರಮೇಣ ಮನುಷ್ಯರಿಗೆ ಪ್ರಸಾರವಾಗುತ್ತದೆ. ಹೆಚ್ಚಿನ ಮಾನವ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿವೆ. ಸಿಡುಬಿನ ವಿರುದ್ಧ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಂಕಿಪಾಕ್ಸ್ ರೋಗಕ್ಕೂ ಅನುಮೋದಿಸಲಾಗಿದೆ ಮತ್ತು ಹಲವಾರು ಆ್ಯಂಟಿ ವೈರಲ್‌ಗಳೂ  ಪರಿಣಾಮಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News