ಅತಿರೇಕದ ನಿರ್ಬಂಧ ಅಥವಾ ಆಹಾರ ಪೂರೈಕೆ: ಆಯ್ಕೆ ನಿಮ್ಮದು; ಪಾಶ್ಚಿಮಾತ್ಯರಿಗೆ ರಶ್ಯ ಸಲಹೆ

Update: 2022-05-20 18:19 GMT
photography:getty images

ಮಾಸ್ಕೊ, ಮೇ 20: ರಶ್ಯದ ಮೇಲೆ ಹಲವು ರೀತಿಯ ನಿರ್ಬಂಧ ಹೇರಿದರೂ ಆ ದೇಶದಿಂದ ಆಹಾರವಸ್ತು ಪೂರೈಕೆ ಮುಂದುವರಿಯಲಿದೆ ಎಂದು ಪಾಶ್ಚಿಮಾತ್ಯ ದೇಶಗಳು ಭಾವಿಸಬಾರದು ಎಂದು ರಶ್ಯದ ಮಾಜಿ ಅಧ್ಯಕ್ಷ, ಹಾಲಿ ಭದ್ರತಾ ಅಧಿಕಾರಿ ಡಿಮಿಟ್ರಿ ಮೆಡ್ವೆಡೇವ್ ಗುರುವಾರ ಹೇಳಿದ್ದಾರೆ.
 ಅತಿರೇಕದ, ಹುಚ್ಚುತನದ ನಿರ್ಬಂಧ ಅಥವಾ ಆಹಾರ ಪೂರೈಕೆ, ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮ್ಮ ಎದುರಿದೆ. ನಮ್ಮ ದೇಶ ತನ್ನ ಬದ್ಧತೆಯನ್ನು ಸಂಪೂರ್ಣ ಈಡೇರಿಸಲು ಸಿದ್ಧವಿದೆ. ಆದರೆ ನಮ್ಮ ವ್ಯಾಪಾರ ಪಾಲುದಾರರಿಂದ ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಒಂದೆಡೆ ಅತಿರೇಕದ ನಿರ್ಬಂಧ, ಇನ್ನೊಂದೆಡೆ ಆಹಾರ ವಸ್ತು ಪೂರೈಕೆ ಸಾಧ್ಯವಾಗದು. ನಾವು ಮೂರ್ಖರಲ್ಲ ಎಂದವರು ಹೇಳಿದ್ದಾರೆ.


ನಮ್ಮಿಂದ ಗೋಧಿ ಹಾಗೂ ಇತರ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳುವ ದೇಶಗಳು ರಶ್ಯದಿಂದ ಪೂರೈಕೆಯಿಲ್ಲದೆ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಜೊತೆಗೆ, ಯುರೋಪ್ ಮತ್ತು ಇತರೆಡೆಯ ಗದ್ದೆಗಳಲ್ಲಿ ನಮ್ಮ ರಸಗೊಬ್ಬರವಿಲ್ಲದೆ ಕೇವಲ ಕಳೆಗಳು ಮಾತ್ರ ಬೆಳೆಯಲಿವೆ. ಇತರ ದೇಶಗಳಲ್ಲಿ ಆಹಾರದ ಕೊರತೆಯಾಗದಂತೆ, ಸಾಕಷ್ಟು ಆಹಾರವಸ್ತು ಪೂರೈಕೆಯಾಗುವುದನ್ನು ಖಾತರಿಪಡಿಸಲು ನಮಗೆ ಎಲ್ಲಾ ಅವಕಾಶಗಳಿವೆ. ನಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ನಡೆಸಬಾರದು ಅಷ್ಟೇ ಎಂದು ಮೆಡ್ವಡೇವ್ ಹೇಳಿದ್ದಾರೆ. ಅವರು 2008ರಿಂದ 2012ರ ಅವಧಿಯಲ್ಲಿ ರಶ್ಯದ ಅಧ್ಯಕ್ಷರಾಗಿದ್ದರು.


ವಿಶ್ವಕ್ಕೆ ಪೂರೈಕೆಯಾಗುವ ಗೋಧಿಯಲ್ಲಿ 30%ದಷ್ಟನ್ನು ರಶ್ಯ ಮತ್ತು ಉಕ್ರೇನ್ ಪೂರೈಸುತ್ತಿದೆ. ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕ, ಬ್ರಿಟನ್ ಸಹಿತ ಹಲವು ಪ್ರಮುಖ ದೇಶಗಳು ರಶ್ಯದ ಮೇಲೆ ನಿರ್ಬಂಧ ವಿಧಿಸಿವೆ. ಇದಕ್ಕೆ ಪ್ರತಿಯಾಗಿ ರಶ್ಯವು ಪಾಶ್ಚಿಮಾತ್ಯ ದೇಶಗಳಿಗೆ ಆಹಾರ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಮತ್ತು ಉಕ್ರೇನ್‌ನಿಂದ ರಫ್ತಾಗಲು ತಡೆಯೊಡ್ಡಿದೆ. ಇದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಹಾರವಸ್ತುಗಳ ಕೊರತೆಯ ಜತೆ ದರ ಗಗನಕ್ಕೇರಿದೆ. ಕಪ್ಪು ಸಮುದ್ರದಲ್ಲಿನ ಉಕ್ರೇನ್ ಬಂದರಿನಲ್ಲಿ ದಾಸ್ತಾನು ಮಾಡಿರುವ ಆಹಾರ ವಸ್ತುಗಳ ರಫ್ತಿಗೆ ತಡೆಯೊಡ್ಡದಂತೆ ವಿಶ್ವಸಂಸ್ಥೆಯು ರಶ್ಯಕ್ಕೆ ಕರೆ ನೀಡಿದೆ.

ತನ್ನ ಆಹಾರವಸ್ತುಗಳ ರಫ್ತು ಸ್ಥಗಿತಗೊಳಿಸಿದ ಜತೆಗೆ, ಉಕ್ರೇನ್‌ನಿಂದ ಪೂರೈಕೆಯಾಗುವ ಆಹಾರ ವಸ್ತುಗಳಿಗೂ ತಡೆಯೊಡ್ಡುವ ಮೂಲಕ ರಶ್ಯವು ವಿಶ್ವದಾದ್ಯಂತದ ಮಿಲಿಯಾಂತರ ಜನರ ಆಹಾರಕ್ಕೆ ತಡೆಯೊಡ್ಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಯ ವಿದೇಶ ವ್ಯವಹಾರ ಇಲಾಖೆಯ ವಕ್ತಾರೆ ಮರಿಯಾ ಝಕರೋವ, ಆಹಾರ ಬಿಕ್ಕಟ್ಟು ಪಾಶ್ಚಿಮಾತ್ಯರ ನಿರ್ಬಂಧದ ಪ್ರತಿಫಲವಾಗಿದೆ. ನಮ್ಮ ದೇಶವು ಜಾಗತಿಕ ಆಹಾರ ಮಾರುಕಟ್ಟೆಯ ಸ್ಥಿರ ಕಾರ್ಯನಿರ್ವಹಣೆಯಲ್ಲಿ ನಮ್ಮ ದೇಶ ಆಸಕ್ತಿ ಹೊಂದಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News