ಉಕ್ರೇನ್ ನ ಲಿಮಾನ್ ನಗರ ರಶ್ಯ ಪರ ಪ್ರತ್ಯೇಕತಾವಾದಿಗಳ ವಶಕ್ಕೆ: ವರದಿ

Update: 2022-05-27 16:16 GMT

ಕೀವ್, ಮೇ 27: ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿರುವ ಉಕ್ರೇನ್ ನ ಲಿಮಾನ್ ನಗರವನ್ನು ವಶಕ್ಕೆ ಪಡೆದಿರುವುದಾಗಿ ರಶ್ಯ ಪರ ಪ್ರತ್ಯೇಕತಾವಾದಿಗಳು ಶುಕ್ರವಾರ ಘೋಷಿಸಿದ್ದಾರೆ.

 ಉಕ್ರೇನ್ನ ಪೂರ್ವದ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಲಿಮಾನ್ ನಗರದ ಮೂಲಕ ಸಾಗುತ್ತದೆ. ‘ರಶ್ಯದ ಸೇನೆಯೊಂದಿಗೆ ಪ್ರತ್ಯೇಕತಾವಾದಿ ಪಡೆಗಳು ಲಿಮಾನ್ ನಗರದ ಸಹಿತ 220 ಪ್ರದೇಶಗಳನ್ನು ವಿಮೋಚನೆಗೊಳಿಸಿ ಸಂಪೂರ್ಣ ನಿಯಂತ್ರಣಕ್ಕೆ ಪಡೆದಿವೆ ಎಂದು ಪ್ರತ್ಯೇಕಗೊಣಡ ಡೊನೆಟ್ಸ್ಕ್ ವಲಯದ ಪ್ರತಿನಿಧಿಗಳು ಹೇಳಿದ್ದಾರೆ.

 ಪೂರ್ವ ಡೊನೆಟ್ಸ್ಕ್ ವಲಯದ ಉತ್ತರದಲ್ಲಿರುವ ಲಿಮಾನ್ ನಗರದ ಮೂಲಕ ಸಾಗುವ ರಸ್ತೆಯು ಉಕ್ರೇನ್ ನಿಯಂತ್ರಣದಲ್ಲಿರುವ ಸ್ಲೊವಿಯಾಂಸ್ಕ್ ಮತ್ತು ಕ್ರಮಟೊರೊಸ್ಕ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಧ್ಯೆ, ಉಕ್ರೇನ್ನಿಂದ ವಶಪಡಿಸಿಕೊಂಡಿರುವ ಖೆರ್ಸಾನ್ ಮತ್ತು ಝಪೊರಿಝಿಯಾ ಪ್ರಾಂತಗಳಿಗೆ ರಶ್ಯವು ಆಡಳಿತಾಧಿಕಾರಿಗಳನ್ನು ನೇಮಿಸಿದ್ದು ಇವೆರಡೂ ರಶ್ಯದ ಭಾಗವಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಪುಟಿನ್ ಪ್ರಸ್ತಾವವನ್ನು ತಿರಸ್ಕರಿಸಿದ ಅಮೆರಿಕ

ರಶ್ಯದ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಿದರೆ ಉಕ್ರೇನ್ ಬಂದರಿನಿಂದ ಆಹಾರ ಧಾನ್ಯ ಹೊರಸಾಗಿಸಲು ಅವಕಾಶ ನೀಡುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿರಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸುವುದಾಗಿ ಅಮೆರಿಕ ಹೇಳಿದೆ.
ಜಾಗತಿಕ ಆಹಾರ ಬಿಕ್ಕಟ್ಟಿನ ಹೊಣೆಯನ್ನು ರಶ್ಯ ಹೊರಲೇಬೇಕು ಎಂದು ಹೇಳಿರುವ ಅಮೆರಿಕ, ಮುಂದಿನ ವಾರ ಉಕ್ರೇನ್ಗೆ ಹೊಸ ನೆರವಿನ ಪ್ಯಾಕೇಜ್ ಘೋಷಿಸಲಾಗುವುದು ಎಂದಿದೆ. ಇದರಲ್ಲಿ ದೀರ್ಘ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆ ಸಹಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರಲಿವೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News