ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪಕ್ಕೆ 1,000ಕ್ಕೂ ಹೆಚ್ಚು ಮಂದಿ ಬಲಿ

Update: 2022-06-22 12:44 GMT

ಕಾಬುಲ್: ಪೂರ್ವ ಅಫ್ಗಾನಿಸ್ತಾನದಲ್ಲಿ ಪಾಕಿಸ್ತಾನ್ ಗಡಿ ಸಮೀಪದ ಪಕ್ತಿಕಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ಪ್ರಬಲ ಭೂಕಂಪನದಿಂದ ಕನಿಷ್ಠ 1000ಕ್ಕೂ ಹೆಚ್ಚು ಜನರು ಮೃತಪಟ್ಟು 600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1 ಎಂದು ದಾಖಲಾಗಿದೆ. ಸದ್ಯ ಮೃತರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಪ್ರಾಂತ್ಯದಲ್ಲಿ ಸುಮಾರು 90 ಮನೆಗಳು ಭೂಕಂಪದಿಂದ ಕುಸಿದಿದ್ದು ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿರುವ ಭೀತಿಯಿದೆ. ಸಂತ್ರಸ್ತರನ್ನು ಹೆಲಿಕಾಫ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಪ್ರಯತ್ನ ನಡೆದಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದೆ. ಅಫ್ಗಾನಿಸ್ತಾನದ ಖೋಸ್ಟ್ ಪ್ರಾಂತ್ಯದ ಒಂದು ಜಿಲ್ಲೆಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಳ ಕುರಿತು ಸೂಕ್ತ ಕ್ರಮಕೈಗೊಳ್ಳಲು ಕಾಬೂಲ್‍ನಲ್ಲಿ ಪ್ರಧಾನಿ ಮೊಹಮ್ಮದ್ ಹಸನ್ ಅಖುಂದ್ ತುರ್ತು ಸಭೆ ನಡೆಸಿದ್ದಾರೆ.

ಅಫ್ಗಾನ್ ಗಡಿ ಸಮೀಪದ ಪಾಕಿಸ್ತಾನದ ಕೆಲ ಸ್ಥಳಗಳಲ್ಲಿಯೂ ಭೂಕಂಪದಿಂದ ಹಾನಿಯುಂಟಾದ ವರದಿಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News