ಪಾಕಿಸ್ತಾನದಲ್ಲಿ ಪೇಪರ್ ಕೊರತೆಯಿಂದ ಹೊಸ ಪಠ್ಯಪುಸ್ತಕ ಮುದ್ರಣ ಸ್ಥಗಿತ

Update: 2022-06-24 15:49 GMT
Photo: Pixabay

ಇಸ್ಲಮಾಬಾದ್, ಜೂ.24: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಇದೀಗ ಪೇಪರ್ ಕೊರತೆಯೂ ಕಾಣಿಸಿಕೊಂಡಿದೆ. ಆದ್ದರಿಂದ ಆಗಸ್ಟ್ನಲ್ಲಿ ಆರಂಭಗೊಳ್ಳಲಿರುವ ಹೊಸ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ದೊರಕುವುದಿಲ್ಲ ಎಂದು ಪಾಕಿಸ್ತಾನ್ ಪೇಪರ್ ಅಸೋಸಿಯೇಷನ್ ಹೇಳಿದೆ.

ಜಾಗತಿಕ ಹಣದುಬ್ಬರ ಪೇಪರ್ ಬಿಕ್ಕಟ್ಟಿಗೆ ಕಾರಣವಾಗಿದ್ದರೂ, ಪಾಕಿಸ್ತಾನದಲ್ಲಿ ಈಗ ಉಲ್ಬಣಿಸಿರುವ ಪೇಪರ್ ಬಿಕ್ಕಟ್ಟಿಗೆ ಸರಕಾರಗಳ ತಪ್ಪು ಕಾರ್ಯನೀತಿ ಮತ್ತು ಸ್ಥಳೀಯ ಪೇಪರ್ ಸಂಸ್ಥೆಗಳ ಏಕಸ್ವಾಮ್ಯ ಕಾರಣವಾಗಿದೆ. ಪೇಪರ್ ಬೆಲೆ ಗಗನಕ್ಕೇರಿದೆ. ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಪಠ್ಯ ಪುಸ್ತಕದ ದರವನ್ನು ನಿರ್ಧರಿಸಲು ಅಸಾಧ್ಯವಾಗಿದೆ ಎಂದು ಅಖಿಲ ಪಾಕಿಸ್ತಾನ ಪೇಪರ್ ವ್ಯಾಪಾರಿಗಳ ಸಂಘ, ಪಾಕಿಸ್ತಾನ್ ಅಸೋಸಿಯೇಷನ್ ಆಫ್ ಪ್ರಿಂಟಿಂಗ್ ಗ್ರಾಫಿಕ್ ಆರ್ಟ್ ಇಂಡಸ್ಟ್ರಿ, ಪೇಪರ್ ಉದ್ಯಮಕ್ಕೆ ಸಂಬಂಧಿಸಿದ ಇತರ ಸಂಘಟನೆಗಳು, ದೇಶದ ಪ್ರಮುಖ ಅರ್ಥಶಾಸ್ತ್ರಜ್ಞ ಡಾ. ಖೈಸರ್ ಬೆಂಗಾಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದರಿಂದ ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂಂಖ್ವ ಪ್ರಾಂತಗಳ ಪಠ್ಯಪುಸ್ತಕ ಮಂಡಳಿಗಳು ಪಠ್ಯಪುಸ್ತಕ ಮುದ್ರಣ ಸ್ಥಗಿತಕ್ಕೆ ನಿರ್ಧರಿಸಿವೆ.

ಈ ಮಧ್ಯೆ, ಪಾಕಿಸ್ತಾನವು ಸಾಲ ಪಾವತಿಸಲು ಸಾಲ ಪಡೆಯುವಂತಹ ವಿಷ ವರ್ತುಲಕ್ಕೆ ಸಿಲುಕಲು ದೇಶದ ಅಸಮರ್ಥ ಮತ್ತು ವಿಫಲ ಆಡಳಿತಗಾರರು ಕಾರಣ ಎಂದು ಅಂಕಣಕಾರ ಅಯಾರ್ ಅಮೀರ್ ಹೇಳಿದ್ದಾರೆ. ದೇಶವನ್ನು ಆಳಿದ ಸರ್ವಾಧಿಕಾರಿಗಳ ಸರಕಾರವನ್ನು ನಾವು ನೋಡಿದ್ದೇವೆ, ಇವರೆಲ್ಲರ ಆಡಳಿತ ಶೈಲಿಯಲ್ಲಿ ಇದ್ದ ಸಮಾನ ಅಂಶವೆಂದರೆ ‘ ಸಮಸ್ಯೆ ಪರಿಹರಿಸಲು ಸಾಲ ಪಡೆಯುವುದು ಮತ್ತು ಸಾಲ ಮರುಪಾವತಿಸಲು ಮತ್ತಷ್ಟು ಸಾಲ ಪಡೆಯುವುದು’. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ನಮಗೆ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ದೊರಕದು. ಝಿಯಾ ಉಲ್ಹಖ್ ಆಡಳಿತದ ಸಂದರ್ಭ ದೇಶದ ಜನಸಂಖ್ಯೆ 11 ಕೋಟಿ ಆಗಿತ್ತು. ಆಗ ನಮಗೆ ಸಮಸ್ಯೆ ಪರಿಹರಿಸಲು ಆಗಿಲ್ಲ. ಈಗ ಜನಸಂಖ್ಯೆ 22 ಕೋಟಿಗೆ ಹೆಚ್ಚಿದೆ. ಈಗ ಸಾಧ್ಯವಾದೀತೇ ? ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News