ಗ್ವಾಂಟನಾಮೊ ಮಿಲಿಟರಿ ಜೈಲಿನಲ್ಲಿ ಆರೋಪಗಳಿಲ್ಲದೇ 15 ವರ್ಷ ಬಂಧಿಯಾಗಿದ್ದ ಕೊನೆಯ ಅಫ್ಘಾನ್‌ ವ್ಯಕ್ತಿ ಬಿಡುಗಡೆ

Update: 2022-06-24 17:28 GMT
Photo: Twitter

ಕತಾರ್: ವಾಷಿಂಗ್ಟನ್‌ನೊಂದಿಗಿನ ಸುದೀರ್ಘ ಮಾತುಕತೆಗಳ ನಂತರ ಕ್ಯೂಬಾದ ಗ್ವಾಂಟನಾಮೊ ಬೇ ಮಿಲಿಟರಿ ಜೈಲಿನಲ್ಲಿ ಬಂಧಿಯಾಗಿದ್ದ, ಆಫ್ಘನ್ ಬಂಧಿತರಲ್ಲಿ ಕೊನೆಯವರೆಂದು ನಂಬಲಾದ ವ್ಯಕ್ತಿಯನ್ನು ಯುನೈಟೆಡ್ ಸ್ಟೇಟ್ಸ್ ಬಿಡುಗಡೆ ಮಾಡಿದೆ ಎಂದು ANI ವರದಿ ಮಾಡಿದೆ.

ನಲವತ್ತು ವರ್ಷದ ಬಂಧಿತ ಅಸಾದುಲ್ಲಾ ಹಾರೂನ್ ಗುಲ್ ಅವರನ್ನು ಹಾರೂನ್ ಅಲ್-ಅಫ್ಘಾನಿ ಎಂಬ ಹೆಸರಿನಲ್ಲಿ 15 ವರ್ಷಗಳ ಕಾಲ ಮಿಲಿಟರಿ ಜೈಲಿನಲ್ಲಿ ಇರಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಖೈದಿಯ ಮೇಲೆ ಇದುವರೆಗೂ ಯಾವುದೇ ಯುದ್ಧಾಪರಾಧದ ಆರೋಪ ಹೊರಿಸಲಾಗಿಲ್ಲ ಎಂದು ಎಎನ್‌ಐ ವರದಿಯಲ್ಲಿ ಹೇಳಿದೆ.

ಹಾರೂನ್ ಅವರನ್ನು ಹೊತ್ತ ವಾಯುಪಡೆಯ ವಿಮಾನವು ಗುರುವಾರ ಗ್ವಾಂಟನಾಮೊ ದಿಂದ ಹೊರಟು ಕತಾರ್‌ಗೆ ತಲುಪಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಕತಾರ್ ಅಧಿಕಾರಿಗಳು ಹಾರೂನ್ ಅವರನ್ನು ದೋಹಾದಲ್ಲಿ ತಾಲಿಬಾನ್ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಹಾರೂನ್ ಗುಲ್ ಬಿಡುಗಡೆಯನ್ನು ತಾಲಿಬಾನ್ ಸದಸ್ಯ ಜಬಿಹುಲ್ಲಾ ಮುಜಾಹಿದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಘೋಷಿಸಿದ್ದಾರೆ. ಗ್ವಾಂಟನಾಮೊ ಬೇಯಲ್ಲಿ ಕಳೆದ ಇಬ್ಬರು ಅಫಘಾನ್ ಕೈದಿಗಳಲ್ಲಿ ಹಾರೂನ್‌ ಒಬ್ಬರು ಎಂದು ಅವರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News