ಪ್ರಧಾನಿ ಬೆನೆಟ್ ಅಧಿಕಾರಾವಧಿ ನಾಳೆ ಮುಕ್ತಾಯ: ಇಸ್ರೇಲ್‌ನಲ್ಲಿ ಮಧ್ಯಂತರ ಚುನಾವಣೆ ?

Update: 2022-06-29 17:01 GMT

ಜೆರುಸಲೇಂ, ಜೂ.29: ಕಳೆದ ವರ್ಷ ಮಾಡಿಕೊಂಡ ಅಧಿಕಾರ ಹಂಚಿಕೆ ಒಪ್ಪಂದದಂತೆ ಇಸ್ರೇಲ್‌ನ ಹಾಲಿ ಅಧ್ಯಕ್ಷ ನಫ್ತಾಲಿ ಬೆನೆಟ್ ಅವರ ಅಧಿಕಾರಾವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದ್ದು ಇಸ್ರೇಲ್‌ನ ಸಂಸತ್ತು ವಿಸರ್ಜನೆಗೊಳ್ಳುವ ನಿರೀಕ್ಷೆಯಿದೆ. ಮುಂದಿನ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕಳೆದೊಂದು ವರ್ಷದಿಂದ ಪ್ರಧಾನಿ ಹುದ್ದೆಯಲ್ಲಿರುವ ನಫ್ತಾಲಿ ಬೆನೆಟ್ ಅವರು ಅಧಿಕಾರ ಕಳೆದುಕೊಳ್ಳಲಿದ್ದು ಈಗ ವಿದೇಶಾಂಗ ಸಚಿವರಾಗಿರುವ ಯಾಯಿರ್ ಲ್ಯಾಪಿಡ್ ಉಸ್ತುವಾರಿ ಸರಕಾರದ ಪ್ರಧಾನಿಯಾಗಿ ಆಯ್ಕೆಗೊಳ್ಳಲಿದ್ದಾರೆ ಎಂದು ಇಸ್ರೇಲ್ ಸರಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮಧ್ಯಂತರ ಚುನಾವಣೆ ಘೋಷಣೆಯಾದರೆ, ಕಳೆದ 4 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಇದು 5ನೇ ಸಾರ್ವತ್ರಿಕ ಚುನಾವಣೆಯಾಗಲಿದೆ.

ಸಂಸತ್ತಿನ ವಿಸರ್ಜನೆ ಬಹುತೇಕ ಖಚಿತವಾಗಿದ್ದರೂ, ಇಸ್ರೇಲ್‌ನ ಅಸ್ಥಿರ ರಾಜಕೀಯ ವಾತಾವರಣವನ್ನು ಗಮನಿಸಿದರೆ ಅಂತಿಮ ಕ್ಷಣದ ಅಚ್ಚರಿ ಸಂಭವಿಸುವ ಸಾಧ್ಯತೆಯೂ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಧ್ಯಂತರ ಚುನಾವಣೆ ನಡೆಸುವ ಬಗ್ಗೆ ಯಾವ ಪಕ್ಷಗಳಿಗೂ ಒಲವಿಲ್ಲದ ಕಾರಣ ಹಾಲಿ ವಿದೇಶಾಂಗ ಸಚಿವ ಲ್ಯಾಪಿಡ್ ಕಳೆದ ವರ್ಷದ ಜೂನ್‌ನಲ್ಲಿ ಬೆನೆಟ್ ಜತೆ ಮಾಡಿಕೊಂಡಿರುವ ಅಧಿಕಾರ ಹಂಚಿಕೆ ಒಪ್ಪಂದದಂತೆ ಪ್ರಧಾನಿ ಹುದ್ದೆಗೆ ನೇಮಕಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಸಮ್ಮಿಶ್ರ ಸರಕಾರವನ್ನು ಉಳಿಸಲು ಅಥವಾ ಅಸ್ತಿತ್ವದಲ್ಲಿರುವ ಸಂಸತ್‌ನ ಒಳಗೇ ಹೊಸ ಸರಕಾರವನ್ನು ರಚಿಸುವ ಬಗ್ಗೆ ನಿರಂತರ ಮಾತುಕತೆ ನಡೆಯುತ್ತಿರುವ ಮಧ್ಯೆ, ಬೆನೆಟ್ ಅವರ 8 ಪಕ್ಷಗಳ ಮೈತ್ರಿಕೂಟ ಬುಧವಾರ ಮಧ್ಯರಾತ್ರಿ ಕೊನೆಗೊಳ್ಳಲಿದೆ. 2021ರ ಚುನಾವಣೆ ಸಂದರ್ಭ 8 ಪಕ್ಷಗಳ ಮೋಟ್ಲೆ ಮೈತ್ರಿಕೂಟ ರಚಿಸಿದ್ದ ಬೆನೆಟ್, ನೆತನ್ಯಾಹು ಅವರ ನಿರಂತರ 12 ವರ್ಷದ ದಾಖಲೆ ಆಡಳಿತಕ್ಕೆ ಅಂತ್ಯ ಹಾಡಿದ್ದರು. ಧಾರ್ಮಿಕ ರಾಷ್ಟ್ರೀಯತಾವಾದಿಯಾಗಿರುವ ಬೆನೆಟ್, ಬಲಪಂಥೀಯರು, ಇಸ್ಲಾಮ್ ಪಕ್ಷದ ರ್ಯಾಮ್ ಬಣ ( ಇಸ್ರೇಲ್‌ನ 74 ವರ್ಷದ ಇತಿಹಾಸದಲ್ಲೇ ಯೆಹೂದಿ ಸರಕಾರಕ್ಕೆ ಬೆಂಬಲ ನೀಡಿದ ಪ್ರಥಮ ಅರಬ್ ಪಕ್ಷ) ಸಹಿತ 8 ಪಕ್ಷಗಳ ಬೆಂಬಲದಿಂದ ಸರಕಾರ ರಚಿಸಿದ್ದರು. ನೆತನ್ಯಾಹು ಅವರನ್ನು ಪದಚ್ಯುತಗೊಳಿಸುವ ಮತ್ತು ಅನಿರ್ದಿಷ್ಟ ಚುನಾವಣೆಗಳ ಹಾನಿಕಾರಕ ಆವೃತ್ತಿಗಳನ್ನು ಮುರಿಯುವ ಏಕಮಾತ್ರ ಉದ್ದೇಶದಿಂದ ಒಟ್ಟುಗೂಡಿದ್ದ ಈ ಮೈತ್ರಿಕೂಟ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಆರಂಭದಿಂದಲೂ ದುರ್ಬಲಗೊಂಡಿತ್ತು.

ಸುಮಾರು 4,75,000 ಯೆಹೂದಿ ನಾಗರಿಕರನ್ನು ಆಕ್ರಮಿತ ಪಶ್ಚಿಮದಂಡೆಯಲ್ಲಿ ನೆಲೆಗೊಳಿಸುವುದಕ್ಕೆ ಅನುವು ನೀಡುವ ‘ವೆಸ್ಟ್‌ಬ್ಯಾಂಕ್ ಲಾ’ ಮಸೂದೆಯನ್ನ ಬೆಂಬಲಿಸಲು ಮೈತ್ರಿಕೂಟದ ಕೆಲವು ಅರಬ್ ಸಂಸದರು ನಿರಾಕರಿಸುವುದರೊಂದಿಗೆ ಭಿನ್ನಮತ ಬಯಲಿಗೆ ಬಂದಿತ್ತು. ವೆಸ್ಟ್‌ಬ್ಯಾಂಕ್ ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆಯಲು ನಾವು ಕಡೆಯ ಕ್ಷಣದವರೆಗೂ ಸಿಂಹದಂತೆ ಹೋರಾಡಿದೆವು. ಆದರೆ ಅಂತಿಮವಾಗಿ ಅದು ಅಸಾಧ್ಯವಾಯಿತು ಎಂದು ಬೆನೆಟ್ ಹೇಳಿದ್ದರು. ಇದೀಗ ಮೈತ್ರಿಕೂಟ ಮುರಿದು ಬಿದ್ದಿರುವುದರಿಂದ ಮಧ್ಯಂತರ ಪ್ರಧಾನಿ ಲ್ಯಾಪಿಡ್‌ಗೆ ಸಂಸತ್ತಿನಲ್ಲಿ ಬಹುಮತ ಸಾಬೀತಿಗೆ ಕಷ್ಟವಾಗಬಹುದು. ಆದರೆ ಯಾವುದೇ ಕಾರಣಕ್ಕೂ, ಭ್ರಷ್ಟಾಚಾರದ ಪ್ರಕರಣ ಎದುರಿಸುತ್ತಿರುವ ಮಾಜಿ ಪ್ರಧಾನಿ ನೆತನ್ಯಾಹು ಜತೆ ಕೈಜೋಡಿಸುವುದಿಲ್ಲ ಎಂದು ಲ್ಯಾಪಿಡ್ ಹೇಳಿರುವುದರಿಂದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News