ತೈವಾನ್ ವಾಯುಪ್ರದೇಶ ಪ್ರವೇಶಿಸಿದ 21 ಚೀನಿ ಯುದ್ಧ ವಿಮಾನ
ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸ್ವಯಂ-ಆಡಳಿತದ ದ್ವೀಪರಾಷ್ಟ್ರಕ್ಕೆ ಭೇಟಿ ಆರಂಭಿಸಿದ ಬೆನ್ನಲ್ಲೇ ಚೀನಾ ಸೇನೆಯ 20ಕ್ಕೂ ಹೆಚ್ಚು ಯುದ್ಧ ವಿಮಾನಗಳು ತೈವಾನ್‍ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ದ್ವೀಪರಾಷ್ಟ್ರ ತನ್ನದು ಎನ್ನುವುದು ಚೀನಾದ ಪ್ರತಿಪಾದನೆ ಎಂದು ndtv.com ವರದಿ ಮಾಡಿದೆ.
"21 ಪಿಎಲ್‍ಎ ವಿಮಾನಗಳು ಆಗಸ್ಟ್ 2ರಂದು ತೈವಾನ್‍ನ ನೈರುತ್ಯ ಎಡಿಝ್ ಪ್ರದೇಶವನ್ನು ಪ್ರವೇಶಿಸಿವೆ" ಎಂದು ದ್ವೀಪರಾಷ್ಟ್ರದ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ. ಎಡಿಝ್ ಥೈವಾನ್‍ನ ಗಡಿಯೊಳಗಿರುವ ವಾಯುಪ್ರದೇಶವಲ್ಲದಿದ್ದರೂ, ಚೀನಾದ ಸ್ವಂತ ವಾಯುರಕ್ಷಣಾ ಗುರುತಿಸುವಿಕೆ ವಲಯದಿಂದ ದೂರ ಪ್ರದೇಶಗಳೂ ಇದಕ್ಕೆ ಸೇರುತ್ತವೆ. ಕೆಲ ಭಾಗ ದೇಶದ ವಾಯುಪ್ರದೇಶಕ್ಕೂ ಸೇರುತ್ತದೆ.
ಚೀನಾದ ಎಚ್ಚರಿಕೆಯನ್ನು ಧಿಕ್ಕರಿಸಿ ಮಂಗಳವಾರ ಸಂಜೆ ಪೆಲೋಸಿ ಥೈವಾನ್‍ಗೆ ಬಂದಿಳಿದಿದ್ದು, ಇದು ವಿಶ್ವದ ಎರಡು ಸೂಪರ್ ಪವರ್ ಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಅಧ್ಯಕ್ಷರನ್ನು ಹೊರತುಪಡಿಸಿದರೆ, ಅಮೆರಿಕದ ಅತ್ಯುನ್ನತ ಚುನಾಯಿತ ಅಧಿಕಾರಿಯಾಗಿರುವ ಪೆಲೊಸಿ, 25 ವರ್ಷಗಳಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಮೊದಲ ಅತ್ಯುನ್ನತ ಅಧಿಕಾರಿ ಎನಿಸಿದ್ದಾರೆ. ಪೆಲೋಸಿ ಭೇಟಿ, ದೊಡ್ಡ ಪ್ರಚೋದನೆ ಎಂದು ಚೀನಾ ಎಚ್ಚರಿಸಿದೆ.
82 ವರ್ಷ ವಯಸ್ಸಿನ ಸಂಸದೆ, ಅಮೆರಿಕದ ಸೇನಾ ವಿಮಾನದಲ್ಲಿ ದ್ವೀಪರಾಷ್ಟ್ರಕ್ಕೆ ತೆರಳಿರುವ ದೃಶ್ಯಗಳನ್ನು ದೃಶ್ಯಮಾಧ್ಯಮಗಳು ಪ್ರಸಾರ ಮಾಡಿವೆ. ತೈಪೆ ವಿದೇಶಾಂಗ ಸಚಿವ ಜೋಸೆಫ್ ವೂ ಅವರು ತೈಪೆಯ ಸಾಂಗ್‍ಶಾನ್ ವಿಮಾನ ನಿಲ್ದಾಣದಲ್ಲಿ ಪೆಲೋಸಿಯವರನ್ನು ಸ್ವಾಗತಿಸಿದರು.
"ನಮ್ಮ ಈ ನಿಯೋಗದ ಭೇಟಿ ತೈವಾನ್‍ನ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಬದ್ಧತೆಗೆ ಸಂದ ಗೌರವ" ಎಂದು ತೈಪೆಗೆ ಆಗಮಿಸಿದ ಅವರು ಸುದ್ದಿಗಾರರಿಗೆ ತಿಳಿಸಿದರು. ತೈವಾನ್ ಹಾಗೂ ಬೀಜಿಂಗ್ ಬಗೆಗಿನ ಅಮೆರಿಕದ ನೀತಿಗೆ ಇದು ಯಾವುದೇ ರೀತಿಯಲ್ಲಿ ವ್ಯತಿರಿಕ್ತವಲ್ಲ ಎಂದು ಅವರು ಪ್ರತಿಪಾದಿಸಿದರು.
ಈ ಭೇಟಿಗೆ ಪ್ರತಿಯಾಗಿ ನಾವು ನಿಗದಿತ ಗುರಿಗಳ ಮೇಲೆ ಸರಣಿ ಸೇನಾ ಕಾರ್ಯಾಚರಣೆ ನಡೆಸಲಿದ್ದೇವೆ ಹಾಗೂ ಸೇನೆಯನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಚೀನಾ ಪ್ರತಿಕ್ರಿಯಿಸಿದೆ.