ವಿಮಾನ 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ನಿದ್ದೆಗೆ ಜಾರಿದ ಪೈಲಟ್‍ಗಳು!

Update: 2022-08-19 13:49 GMT

 ಹೊಸದಿಲ್ಲಿ: ಸುಡಾನ್‍ನ ಖರ್ತೌಮ್ ಎಂಬಲ್ಲಿಂದ ಇಥಿಯೋಪಿಯಾದ(Etheopia) ರಾಜಧಾನಿ ಅಡ್ಡಿಸ್ ಅಬಾಬಗೆ (Addis Ababa) ತೆರಳುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್(Etheopean Airlines) ವಿಮಾನವೊಂದು ಭೂಮಿಯಿಂದ 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನದ ಇಬ್ಬರು ಪೈಲಟ್‍ಗಳು(pilots) ನಿದ್ದೆಗೆ ಜಾರಿದ ಪರಿಣಾಮ ವಿಮಾನ ಭೂಸ್ಪರ್ಶ ಮಾಡುವ ಸ್ಥಳದಿಂದಾಚೆಗೆ ಹಾರಾಟ ನಡೆಸಿದ ಘಟನೆ ಸೋಮವಾರ ನಡೆದಿದೆ.

ವಿಮಾನ ನಿಗದಿತ ನಿಲ್ದಾಣದಲ್ಲಿ ಇಳಿಯದೆ ಮುಂದಕ್ಕೆ ಹಾರಾಟ ನಡೆಸುತ್ತಿರುವುದನ್ನು ಗಮನಿಸಿದ ಎಟಿಸಿ ತಕ್ಷಣ ಎಚ್ಚರಿಕೆ ಸಂದೇಶ ರವಾನಿಸಿತ್ತು. ವಿಮಾನದ ಪೈಲಟ್‍ಗಳು ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಈ ಬೋಯಿಂಗ್ 737ರ ಆಟೋಪೈಲಟ್ ಸಿಸ್ಟಂ ವಿಮಾನದ ನಿಯಂತ್ರಣವನ್ನು ಹೊಂದಿತ್ತು.

ವಿಮಾನ ಭೂಸ್ಪರ್ಶ ಮಾಡದೇ ಇದ್ದಾಗ ಎಟಿಸಿ ಅದನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ ವಿಫಲವಾಗಿತ್ತು. ಆದರೆ ವಿಮಾನ ರನ್-ವೇ ದಾಟಿ ಮುಂದೆ ಹಾರಾಟ ನಡೆಸಿದಾಗ ಆಟೋಪೈಲಟ್ ವ್ಯವಸ್ಥೆ ಬಂದ್ ಆಗಿ ಅಲಾರ್ಮ್ ಸದ್ದಾಗಿದ್ದು ಆಗ ಪೈಲಟ್‍ಗಳು ಎಚ್ಚರಗೊಂಡು ನಿಗದಿತ ಸಮಯಕ್ಕಿಂತ 25 ನಿಮಿಷ ತಡವಾಗಿ ವಿಮಾನ ಭೂಸ್ಪರ್ಶ ನಡೆಸಿದೆ.

ಅದೃಷ್ಟವಶಾತ್ ಈ ಘಟನೆಯಿಂದಾಗಿ ಯಾರಿಗೂ ಹಾನಿಯುಂಟಾಗಿಲ್ಲ. ವಿಮಾನದ ಪೈಲಟ್‍ಗಳಿಗೆ ಉಂಟಾಗುವ ಆಯಾಸವೇ ಇಂತಹ ಘಟನೆಗೆ ಕಾರಣ ಎಂದು ತಜ್ಞರು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News