ಗಾಂಜಾ ಹೊಂದಿದ್ದಕ್ಕಾಗಿ, ಸೇವನೆ ಮಾಡಿದ್ದಕ್ಕಾಗಿ ಯಾರೂ ಜೈಲಿನಲ್ಲಿರಬಾರದು: ಜೋ ಬೈಡನ್‌

Update: 2022-10-07 12:00 GMT
ಅಮೆರಿಕ ಅಧ್ಯಕ್ಷ ಜೋ ಬೈಡನ್‌ (PTI)

ವಾಷಿಂಗ್ಟನ್:‌ ಗಾಂಜಾ(marijuana) ಹೊಂದಿದ್ದಕ್ಕಾಗಿ ಹಾಗೂ ಸೇವನೆ ಮಾಡಿದ್ದಕ್ಕಾಗಿ ಯಾರನ್ನೂ ಬಂಧಿಸಬಾರದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌(US President Joe Biden) ಗುರುವಾರ ಹೇಳಿದ್ದಾರೆ.

ಮರಿಜುವಾನ ಅಥವಾ ಗಾಂಜಾ ಹೊಂದಿದ್ದಕ್ಕಾಗಿ ರಾಷ್ಟ್ರೀಯ ಕಾನೂನಿನಡಿ ಶಿಕ್ಷೆಗೊಳಗಾಗಿದ್ದ ಸಾವಿರಾರು ಅಮೆರಿಕನ್‌ ನಾಗರಿಕರಿಗೆ ಕ್ಷಮಾದಾನ ಒದಗಿಸುವ ವೇಳೆ ಅವರು ಮೇಲಿನಂತೆ ಹೇಳಿದರು.

"ತಪ್ಪಿತಸ್ಥರೆಂದು ಘೋಷಿತರಾಗಿ ಶಿಕ್ಷೆಗೊಳಗಾಗಿ ನಂತರ ಉದ್ಯೋಗ ನಿರಾಕರಣೆಗೊಳಗಾಗಿ, ವಸತಿ ಸೌಲಭ್ಯ ಮತ್ತು ಶಿಕ್ಷಣ ಅವಕಾಶಗಳಿಂದಲೂ ವಂಚಿತರಾದ ಸಾವಿರಾರು ಜನರಿದ್ದಾರೆ. ನನ್ನ ಕ್ಷಮಾದಾನ ಅವರೆಲ್ಲರ ಹೊರೆಯನ್ನು ತೆಗೆದುಹಾಕುವುದು,ʼʼ ಎಂದು ಬೈಡನ್‌ ಹೇಳಿದ್ದಾರೆ.

ರಾಜ್ಯ ಕಾನೂನುಗಳಡಿಯಲ್ಲಿ ಶಿಕ್ಷೆಗೊಳಗಾದವರಿಗೂ ಇದೇ ರೀತಿ ಕ್ಷಮಾದಾನ ಒದಗಿಸಬೇಕೆಂದು ರಾಜ್ಯಗಳ ಗವರ್ನರ್‌ಗಳಿಗೆ ಬೈಡನ್‌ ಕರೆ ನೀಡಿದ್ದಾರೆ.

ಸುದ್ದಿ ಸಂಸ್ಥೆಗಳ ಪ್ರಕಾರ ಬೈಡನ್‌ ಅವರ ನಿರ್ಧಾರದಿಂದ ಸುಮಾರು 6,500 ಅಮೆರಿಕನ್ನರಿಗೆ ಪ್ರಯೋಜನವಾಗಲಿದೆ. ಆದರೆ ಇತರ ಡ್ರಗ್ಸ್‌ ಹೊಂದಿದ್ದಕ್ಕಾಗಿ ಅಥವಾ ಗಾಂಜಾವನ್ನು ಮಾರಾಟ ಮಾಡಲು ಬೆಳೆಸಿದವರಿಗೆ ಕ್ಷಮಾದಾನ ದೊರಕಿಲ್ಲ.

ಗಾಂಜಾ ಅಕ್ರಮ ಸಾಗಾಟ, ಮಾರಾಟ ಹಾಗೂ ಅಪ್ರಾಪ್ತರಿಗೆ ಮಾರಾಟ ತಡೆಗಟ್ಟುವುದು ಅಗತ್ಯ ಹಾಗೂ ಈ ನಿಟ್ಟಿನಲ್ಲಿ ಕಾನೂನುಗಳು ಹಿಂದಿನಂತೆ ಇರಲಿದೆ ಎಂದು ಬೈಡನ್‌ ಹೇಳಿದರಲ್ಲದೆ ಗಾಂಜಾವನ್ನು ಹೆರಾಯಿನ್‌ ಮತ್ತು ಫೆಂಟನಿಲ್‌ ಸಹಿತ ಇತರ ಡ್ರಗ್ಸ್‌ ಜೊತೆಗೆ ವರ್ಗೀಕರಿಸಿರುವುದನ್ನು ಪರಿಶೀಲಿಸುವಂತೆಯೂ ಅವರು ಸಂಬಂಧಿತ ಇಲಾಖೆಗಳಿಗೆ ಸೂಚಿಸಿದ್ದಾರೆ.

ಗಾಂಜಾ ಸಂಬಂಧಿತ ಕಾನೂನುಗಳನ್ನು ಬಿಳಿಯರಲ್ಲದ ಅಮೆರಿಕನ್ನರನ್ನು ಟಾರ್ಗೆಟ್‌ ಮಾಡಲು ಬಳಸಲಾಗುತ್ತಿದೆ ಎಂದು ಜನಾಂಗೀಯ ನ್ಯಾಯ ಹೋರಾಟಗಾರರ ಆರೋಪಗಳ ಹಿನ್ನೆಲೆಯಲ್ಲಿ ನವೆಂಬರ್‌ 8 ರಂದು ನಡೆಯಲಿರುವ ಮಧ್ಯಂತರ ಚುನಾವಣೆಗೆ ಮುನ್ನ ಬೈಡನ್‌ ಅವರ ಮೇಲಿನ ಘೋಷಣೆ ಬಂದಿದೆ.

ಇದನ್ನೂ ಓದಿ: VIDEO: ಮನೆಯೊಳಗೆ ನುಗ್ಗಿ ಸುತ್ತಾಡಿದ ಚಿರತೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News