ಇರಾನ್ ಆಡಳಿತದ 10,000 ಸದಸ್ಯರಿಗೆ ಪ್ರವೇಶ ನಿರಾಕರಿಸಿದ ಕೆನಡಾ

Update: 2022-10-08 17:11 GMT

ಒಟ್ಟಾವ, ಅ.8: ಇರಾನ್ ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ) ಸೇರಿದಂತೆ `ಹಂತಕ ಇರಾನ್ ಆಡಳಿತ'ದ 10,000ಕ್ಕೂ ಅಧಿಕ ಸದಸ್ಯರಿಗೆ ದೇಶಕ್ಕೆ ಪ್ರವೇಶಾವಕಾಶವನ್ನು  ಶಾಶ್ವತವಾಗಿ ನಿರಾಕರಿಸುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಘೋಷಿಸಿದ್ದಾರೆ. 

ಕೆನಡಾದ ವಲಸೆ ಮತ್ತು ನಿರಾಶ್ರಿತರ ಕಾಯಿದೆಯ ಅತ್ಯಂತ ಶಕ್ತಿಯುತ ನಿಬಂಧನೆ ಅಡಿಯಲ್ಲಿ ಇರಾನ್ ಅನ್ನು ಪಟ್ಟಿ ಮಾಡಲಾಗುತ್ತದೆ ಎಂದು ಟ್ರೂಡೊ ಹೇಳಿದ್ದು ಕೆನಡಾಕ್ಕೆ ಸ್ವೀಕಾರಾರ್ಹವಲ್ಲದ ಹೇಯ ವರ್ತನೆಗೆ 10,000ಕ್ಕೂ ಐಆರ್ಜಿಸಿ ಸದಸ್ಯರು ಮತ್ತು ಹಿರಿಯ ಸದಸ್ಯರು ಜವಾಬ್ದಾರರಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಯುದ್ಧಾಪರಾಧ ಮತ್ತು ನರಮೇಧ ಕೃತ್ಯಗಳಿಗೆ ಈ ಕಾಯ್ದೆಯ ನಿಬಂಧನೆಯನ್ನು ಅನ್ವಯಿಸಲಾಗುತ್ತಿತ್ತು.  ಆಡಳಿತ ಮತ್ತು ಆಡಳಿತದ ಘಟಕಗಳ ವಿರುದ್ಧ ನಾವು ಕೈಗೊಳ್ಳಬೇಕಾದ ಕಠಿಣ ಕ್ರಮ ಇದಾಗಿದೆ. ನಿಷೇಧಕ್ಕೆ ಗುರಿಯಾಗಿರುವ ಅಧಿಕಾರಿಗಳು ಕೆನಡಾದಲ್ಲಿ ಆಸ್ತಿ ಹೊಂದಿರಲು ಅಥವಾ ಇಲ್ಲಿ ಯಾವುದೇ ಆರ್ಥಿಕ ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ಟ್ರುಡೋ ಹೇಳಿದ್ದಾರೆ. ಇರಾನ್ನ ಪರಮಾಣು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆನಡಾ ಈಗಾಗಲೇ ನಿರ್ಬಂಧ ಹೇರಿದೆ. ಇದೀಗ ನೈತಿಕ ಪೊಲೀಸ್ ಸೇರಿದಂತೆ ಇರಾನ್ನ ಹಲವು ಅಧಿಕಾರಿಗಳ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.

ಇರಾನ್ ನ ಆಡಳಿತವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದು ಇದು ದಮನಕಾರಿ, ದೇವಪ್ರಭುತ್ವ ಮತ್ತು ಸ್ತ್ರೀದ್ವೇಷದ ಆಡಳಿತವಾಗಿದೆ. ಇರಾನ್ನಲ್ಲಿನ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಬೃಹತ್ ಪ್ರಮಾಣದಲ್ಲಿ ಉದ್ದೇಶಿತ ಆರ್ಥಿಕ ನಿರ್ಬಂಧಗಳನ್ನು ವಿಸ್ತರಿಸುತ್ತದೆ ಮತ್ತು ಈ ದೇಶದಲ್ಲಿ ಅವರು ಆರ್ಥಿಕ ವ್ಯವಹಾರ, ಅಕ್ರಮ ಹಣ ಸಂಗ್ರಹದಂತಹ ಕಾರ್ಯ ನಡೆಸುವುದನ್ನು ತಡೆಯಲಾಗುವುದು. ಹೀಗೆ ಪಟ್ಟಿಯಲ್ಲಿ ಸೇರ್ಪಡೆಗೊಂಡವರ ಜತೆ ಸಂಪರ್ಕ ಹೊಂದಿರುವವರ ವೀಸಾ ಅಥವಾ ಶಾಶ್ವತ ನಿವಾಸ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಕೆನಡಾದ ಉಪಪ್ರಧಾನಿ ಕ್ರಿಸ್ತಿಯಾ ಫ್ರೀಲಾಂಡ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಇರಾನ್ ನ ನೈತಿಕ ಪೊಲೀಸರ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಮೃತಪಟ್ಟ ಬಳಿಕ ಆ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಕೆನಡಾದಲ್ಲಿ  ಸಾವಿರಾರು ಜನರು ಬೀದಿಯಲ್ಲಿ ರ್ಯಾಲಿ ನಡೆಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News