ಬಾಂಗ್ಲಾಕ್ಕೆ ಅಪ್ಪಳಿಸಿದ ಸಿತಾಂಗ್ ಚಂಡಮಾರುತ ಕನಿಷ್ಠ 16 ಸಾವು; 10 ಲಕ್ಷ ಮಂದಿಯ ಸ್ಥಳಾಂತರ

Update: 2022-10-25 16:27 GMT

ಕವುಕಟಾ (ಬಾಂಗ್ಲಾ),ಅ.25: ದಕ್ಷಿಣ ಬಾಂಗ್ಲಾ(South Bengal)ದ ಕರಾವಳಿಗೆ ಮಂಗಳವಾರ ಭೀಕರ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಸಮುದ್ರ ತೀರ ಪ್ರದೇಶಗಳಲ್ಲಿನ 10 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   

ಸಿತಾಂಗ್ ಚಂಡಮಾರುತ(Cyclone Sitang)ವು ದಕ್ಷಿಣ ಬಾಂಗ್ಲಾದ ಕರಾವಳಿಗೆ ಸೋಮವಾರ ತಡರಾತ್ರಿ ಅಪ್ಪಳಿಸಿದೆ. ಆದರೆ ಅದಕ್ಕೂ ಮುನ್ನವೇ ಅಧಿಕಾರಿಗಳು ದ್ವೀಪ ಪ್ರದೇಶಗಳು, ನದಿ ದಂಡೆಗಳಂತಹ ತಗ್ಗುಪ್ರದೇಶಗಳಲ್ಲಿ ನೆಲೆಸಿರುವ ಲಕ್ಷಾಂತರ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡಮಾರುತದ ಪ್ರಕೋಪ ರಾಜಧಾನಿ ಢಾಕಾಕ್ಕೂ ಅನುಭವವಾಗಿದ್ದು, ಇಂದು ಸುರಿದ ಭಾರೀ ಗಾಳಿ, ಮಳೆಯಿಂದಾಗಿ ಹಲವಾರು ಮರಗಳು ಧರಾಶಾಯಿಯಾಗಿವೆ.

ಬಾಂಗ್ಲಾದ ಬಹುತೇಕ ಪ್ರದೇಶಗಳಲ್ಲಿ ಸೋಮವಾರ ಭಾರೀ ಗಾಳಿ, ಮಳೆಯಾಗಿದೆ. ಪ್ರಮುಖ ನಗರಗಳಾದ ಢಾಕಾ, ಖುಲ್ನಾ(Dhaka, Khulna) ಹಾಗೂ ಬರಿಸಾಲ್ಗಳಲ್ಲಿ ಸರಾಸರಿ 13 ಇಂಚು ಮಳೆಯಾಗಿರುವುದಾಗಿ ತಿಳಿದುಬಂದಿದೆ.

    

ಮ್ಯಾನ್ಮಾರ್ ನ 33 ಸಾವಿರ ರೋಹಿಂಗ್ಯಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿರುವ ಬಾಂಗ್ಲಾದ ದ್ವೀಪ ಕೂಡಾ ಚಂಡಮಾರುತದ ಭೀತಿಗೆ ಒಳಗಾಗಿದೆ. ಅಲ್ಲಿನ ನಿವಾಸಿಗಳು ಮನೆಯೊಳಗೆ ಉಳಿದುಕೊಳ್ಳುವಂತೆ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಆದೇಶ ನೀಡಿದ್ದಾರೆ. ದಕ್ಷಿಣ ಬಾಂಗ್ಲಾದ ಮಹೇಶ್ಕಾಲಿ ದ್ವೀಪದಲ್ಲಿ ಚಂಡಮಾರುತದ ಆರ್ಭಟ ಜೋರಾಗಿದ್ದು, ಹಲವಾರು ಮರಗಳು ಧರೆಗುರುಳಿವೆ. ವಿದ್ಯುತ್ ಹಾಗೂ ದೂರಸಂಪರ್ಕ ಕಡಿತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ಮೂಲಗಳುತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News