ಸೌದಿ ಅರೆಬಿಯಾದಲ್ಲಿ ಭಾರೀ ಮಳೆ ಇಬ್ಬರು ಮೃತ್ಯು; ರಸ್ತೆ ಸಂಚಾರಕ್ಕೆ ತಡೆ
ರಿಯಾದ್, ನ.25: ಜೆದ್ದಾ(Jeddah) ಸೇರಿದಂತೆ ಪಶ್ಚಿಮ ಸೌದಿ ಅರೆಬಿಯಾ(Saudi Arabia)ದಲ್ಲಿ ಗುರುವಾರ ಸುರಿದ ಭಾರೀ ಮಳೆಯಿಂದ ಇಬ್ಬರು ಮೃತಪಟ್ಟಿದ್ದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಳೆಯಿಂದಾಗಿ ಜೆದ್ದಾ ಮತ್ತು ಮಕ್ಕಾವನ್ನು ಸಂಪರ್ಕಿಸುವ ರಸ್ತೆಯನ್ನು ಗುರುವಾರ ಮುಚ್ಚಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳು ವಿಳಂಬವಾಗಿವೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ಜನರು ಅತ್ಯಗತ್ಯವಾಗಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು ಎಂದು ಮಕ್ಕಾದ ಪ್ರಾಂತೀಯ ಸರಕಾರ ಸೂಚಿಸಿದೆ.
ಜೆದ್ದಾದಲ್ಲಿ ಗುರುವಾರ 179 ಮಿ.ಮೀ ಮಳೆಯಾಗಿದ್ದು ಇದು ದಾಖಲೆಯಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿರಂತರ ಮಳೆ ಸುರಿದಿದೆ ಎಂದು ರಾಷ್ಟ್ರೀಯ ಹವಾಮಾನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಮಕ್ಕಾ ನಗರಸಭೆ ಮಳೆಗಾಲದ ತಯಾರಿಗಾಗಿ 11,800 ಕ್ಷೇತ್ರ ಕಾರ್ಯಕರ್ತರನ್ನು ನೇಮಿಸಿದೆ. ರಸ್ತೆ ಮತ್ತು ಚರಂಡಿಯಲ್ಲಿ ಸಿಲುಕಿರುವ ಕಸಕಡ್ಡಿ ತೆಗೆಯಲು 146 ಯಂತ್ರಗಳು ಮತ್ತು 89 ವಿವಿಧೋದ್ದೇಶ ಟ್ರಕ್ ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.