ಇಂಟೆಲ್ ನಿಂದ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳಿಗೆ ವೇತನರಹಿತ ರಜೆ

Update: 2022-12-10 14:36 GMT

ಹೊಸದಿಲ್ಲಿ: ಇಂಟೆಲ್ (Intel) ಸಂಸ್ಥೆ ಉದ್ಯೋಗ ಕಡಿತ ಶುರು ಮಾಡಿದ್ದು, ಸಾವಿರಾರು ಉದ್ಯೋಗಿಗಳಿಗೆ ವೇತನರಹಿತ ಮೂರು ತಿಂಗಳ ರಜೆ ಘೋಷಿಸಿದೆ ಎಂದು timesofindia ವರದಿ ಮಾಡಿದೆ. ಸಿಲಿಕಾನ್ ವ್ಯಾಲಿಯಲ್ಲಿ ಚಿಪ್ ತಯಾರಿಸುವ ದೈತ್ಯ ಕಂಪನಿಗಳ ಪೈಕಿ ಒಂದಾಗಿರುವ ಇಂಟೆಲ್, ಕಠಿಣ ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಉದ್ಯೋಗ ಕಡಿತ ಮಾಡಿರುವ ಮೆಟಾ (Meta) ಮತ್ತು ಟ್ವಿಟರ್ (Twitter) ಸಂಸ್ಥೆಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದೆ.

ದೊಡ್ಡ ಪ್ರಮಾಣದ ವೆಚ್ಚ ಕಡಿತದ ಭಾಗವಾಗಿ ಕಂಪನಿಯು ಕ್ಯಾಲಿಫೋರ್ನಿಯಾದಲ್ಲಿ ಕೆಲಸ ನಿರ್ವಹಿಸುತ್ತಿರುವ 201 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

'ಉದ್ಯೋಗಿಗಳ ಹೊಂದಾಣಿಕೆ ಮತ್ತು ಪುನರ್ ತರಬೇತಿ ಅಧಿಸೂಚನೆಗಳನ್ನು' ಉಲ್ಲೇಖಿಸಿರುವ ಮಾಧ್ಯಮಗಳು, ಫಾಲ್ಸಾಮ್, ಕ್ಯಾಲಿಫೋರ್ನಿಯಾ ಪ್ರದೇಶದಿಂದ 111 ಉದ್ಯೋಗಿಗಳು, ಸಾಂತಾ ಕ್ಲಾರಾ ಪ್ರದೇಶದಿಂದ 90 ಉದ್ಯೋಗಿಗಳನ್ನು ವಜಾಗೊಳಿಸಲು ಇಂಟೆಲ್ ಮುಂದಾಗಿದೆ ಎಂದು ಹೇಳಿವೆ.

ಮುಂದಿನ ಆರ್ಥಿಕ ಅವಧಿಯ ಹೊತ್ತಿಗೆ ಮೂರು ಬಿಲಿಯನ್ ಡಾಲರ್ ವಾರ್ಷಿಕ ವೆಚ್ಚವನ್ನು ಉಳಿಸಲು ಯೋಜಿಸಿರುವುದಾಗಿ ಅಕ್ಟೋಬರ್ ನಲ್ಲಿ ಇಂಟೆಲ್ ಹೇಳಿಕೊಂಡಿತ್ತು. ಈ ಕುರಿತು ದೀರ್ಘಾವಧಿ ಗುರಿ ಹೊಂದಿರುವ ಕಂಪನಿಯು, 2025ರ ಅಂತ್ಯದ ವೇಳೆಗೆ ಎಂಟರಿಂದ ಹತ್ತು ಬಿಲಿಯನ್ ಡಾಲರ್ ವೆಚ್ಚವನ್ನು ಉಳಿಸುವ ಯೋಜನೆ ಹೊಂದಿದೆ. ಈ ಉಳಿತಾಯವು ಪ್ರಮುಖವಾಗಿ ಉತ್ಪಾದನೆ ಮತ್ತು ಮಾರಾಟ ವಿಭಾಗದಲ್ಲಿನ ಮಾನವ ಸಂಪನ್ಮೂಲ ವೆಚ್ಚ ಕಡಿತದಿಂದ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ ಎಂದು timesofindia ವರದಿ ಮಾಡಿದೆ.

Similar News