ವಾಯುಪ್ರದೇಶ ಉಲ್ಲಂಘಿಸಿದರೆ ಮಿಲಿಟರಿ ಒಪ್ಪಂದ ಅಂತ್ಯ ದಕ್ಷಿಣ ಕೊರಿಯಾ ಎಚ್ಚರಿಕೆ

Update: 2023-01-04 17:27 GMT

ಸಿಯೋಲ್, ಜ.4: ತನ್ನ ವಾಯುಪ್ರದೇಶವನ್ನು ಉತ್ತರ ಕೊರಿಯಾ ಮತ್ತೊಮ್ಮೆ ಉಲ್ಲಂಘಿಸಿದರೆ 2018ರ ಅಂತರ್-ಕೊರಿಯಾ ಮಿಲಿಟರಿ ಒಪ್ಪಂದವನ್ನು  ಅಂತ್ಯಗೊಳಿಸುವ ಬಗ್ಗೆ ಪರಿಗಣಿಸಬೇಕಾಗುತ್ತದೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್‍ಇಯೋಲ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾದ ಡ್ರೋನ್‍ಗಳು ಕಳೆದ ವಾರ ದಕ್ಷಿಣ ಕೊರಿಯಾದ ವಾಯುಪ್ರದೇಶವನ್ನು ಉಲ್ಲಂಘಿಸಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಯೂನ್‍ಸುಕ್, ಅನುಪಾತದ ಮಟ್ಟವನ್ನು ಮೀರಿದ ಅಗಾಧ ಪ್ರತಿಕ್ರಿಯೆಯ ಸಾಮಥ್ರ್ಯ ಬೆಳೆಸಿಕೊಳ್ಳುವುದು ಈಗಿನ ಅಗತ್ಯವಾಗಿದೆ ಎಂದರು. ಡ್ರೋನ್ ಪ್ರಕರಣವನ್ನು ತಮ್ಮ ಸೇನೆ ನಿರ್ವಹಿಸಿದ ಬಗ್ಗೆ ಟೀಕಿಸಿದ ಅವರು, ಈ ಹಿಂದಿನ ಸರಕಾರ 2018ರ ಒಪ್ಪಂದವನ್ನು  ಏಕಪಕ್ಷೀಯವಾಗಿ ಅನುಸರಿಸುತ್ತಿತ್ತು. ಇದು ಸೇನೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಪ್ರತೀಕಾರ ತೀರಿಸಿಕೊಳ್ಳಲು ಸೇನೆ ಸನ್ನದ್ಧವಾಗಿರಬೇಕು  ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಣ್ಗಾವಲು, ವಿಚಕ್ಷಣ ಮತ್ತು ಎಲೆಕ್ಟ್ರಾನಿಕ್ಸ್ ಯುದ್ಧ ಸೇರಿದಂತೆ ಬಹೂಪಯೋಗಿ ಕಾರ್ಯಾಚರಣೆಯನ್ನು ನಿರ್ವಹಿಸುವ ಸಮಗ್ರ ಡ್ರೋನ್ ಘಟಕವನ್ನು ಪ್ರಾರಂಭಿಸಲು ಮತ್ತು ಪತ್ತೆಹಚ್ಚಲು ಸಾಧ್ಯವಾಗದ ಡ್ರೋನ್‍ಗಳನ್ನು ಸಾಮೂಹಿಕವಾಗಿ ಉತ್ಪಾದಿಸುವ ವ್ಯವಸ್ಥೆಯನ್ನು  ವರ್ಷದೊಳಗೆ ಸ್ಥಾಪಿಸಲು ರಕ್ಷಣಾ ಸಚಿವರಿಗೆ  ಸೂಚಿಸಲಾಗಿದೆ. ಸ್ಟೆಲ್ತ್ ಡ್ರೋನ್ ಉತ್ಪಾದನೆ ವೇಗಗೊಳಿಸಲು ಮತ್ತು ಡ್ರೋನ್ ನಾಶದ ವ್ಯವಸ್ಥೆಯನ್ನು ತ್ವರಿತವಾಗಿ ಸ್ಥಾಪಿಸಲು  ಅಧ್ಯಕ್ಷರು ಸೂಚಿಸಿರುವುದಾಗಿ ವರದಿಯಾಗಿದೆ.

2018ರ ಅಂತರ್-ಕೊರಿಯಾ ಒಪ್ಪಂದದ ಪ್ರಕಾರ, ಗಡಿಪ್ರದೇಶದಲ್ಲಿ ಪ್ರತಿಕೂಲ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಆದರೆ ಈ ಒಪ್ಪಂದವನ್ನು ಉತ್ತರ ಕೊರಿಯಾ ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ದಕ್ಷಿಣ ಕೊರಿಯಾ ಆಕ್ರೋಶ ವ್ಯಕ್ತಪಡಿಸಿದೆ.

Similar News