ಅದ್ಭುತ ದೇಶದ ಯಶಸ್ಸಿನ ಭಾಗವಾಗಲು ಅಲ್-ನಸ್ರ್ ಸೇರಿಕೊಂಡೆ: ಸೌದಿ ಕ್ಲಬ್‌ ಸೇರಿರುವ ಕುರಿತು ರೊನಾಲ್ಡೋ ಪ್ರತಿಕ್ರಿಯೆ

Update: 2023-01-04 17:57 GMT

ರಿಯಾದ್: ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸೌದಿ ಅರೇಬಿಯಾದ ಕ್ಲಬ್ ಅಲ್ ನಸ್ರ್‌ಗೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಮಧ್ಯಪ್ರಾಚ್ಯದ ಕ್ಲಬ್ ಒಂದಕ್ಕೆ ರೊನಾಲ್ಡೊ ಸಹಿ ಹಾಕಿರುವುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು.

ಹೊಸ ಕ್ಲಬ್‌ಗೆ ಸೇರಿರುವುದರಿಂದ ತನ್ನ ಫುಟ್‌ಬಾಲ್‌ ವೃತ್ತಿಜೀವನವು ಇನ್ನೂ ಮುಗಿದಿಲ್ಲ ಎಂದು ರೊನಾಲ್ಡೊ ಹೇಳಿದ್ದಾರೆ.

"ಯುರೋಪ್‌ನಲ್ಲಿ ನನ್ನ ಕೆಲಸ ಮುಗಿದಿದೆ. ನಾನು ಯುರೋಪ್‌, ಬ್ರೆಝಿಲ್, ಆಸ್ಟ್ರೇಲಿಯಾ, ಯುಎಸ್‌, ಪೋರ್ಚುಗಲ್‌ ನ (ಕ್ಲಬ್‌ಗಳಿಂದ) ಆಹ್ವಾನವನ್ನು ಪಡೆದಿದ್ದೇನೆ. ಹಲವು ಕ್ಲಬ್‌ಗಳು ನನ್ನೊಂದಿಗೆ ಸಹಿ ಹಾಕಲು ಪ್ರಯತ್ನಿಸಿದವು. ಆದರೆ ನಾನು ಈ ಕ್ಲಬ್‌ಗೆ ನನ್ನ ಮಾತನ್ನು ನೀಡಿದ್ದೇನೆ, ಫುಟ್‌ಬಾಲ್ ಮಾತ್ರವಲ್ಲದೆ, ಈ ಅದ್ಭುತ ದೇಶದ ಯಶಸ್ಸಿನ ಭಾಗವಾಗುವ ಅವಕಾಶಕ್ಕಾಗಿ ನಾನು ಈ ಕ್ಲಬ್ ಜೊತೆ ಸಹಿ ಹಾಕಿದ್ದೇನೆ" ಎಂದು ಅವರು ಹೇಳಿದರು.

ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮೊದಲಾದ ದೊಡ್ಡ ಕ್ಲಬ್ ಗಳ ಪರವಾಗಿ ಆಡಿರುವ ರೊನಾಲ್ಡೊ, ಬರೋಬ್ಬರಿ 200 ಮಿಲಿಯನ್ ಯುರೋಗಳಷ್ಟು ($211m) ಅಂದಾಜು ಮೊತ್ತಕ್ಕೆ ಸೌದಿ ಅರೇಬಿಯಾದ ಅಲ್-ನಸ್ರ್ ಗಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

"ನಾನೊಬ್ಬ ಅದ್ವಿತೀಯ ಆಟಗಾರ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ, ಅಲ್ಲಿ (ಯುರೋಪ್‌ನಲ್ಲಿ) ಎಲ್ಲಾ ದಾಖಲೆಗಳನ್ನು ಮುರಿದಿದ್ದೇನೆ. ಇಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಮುರಿಯಲು ಬಯಸುತ್ತೇನೆ" ಎಂದು ರೊನಾಲ್ಡೊ ಅಲ್-ನಸ್ರ್ ನ ಶ್ರೀಸೂಲ್ ಪಾರ್ಕ್ ಸ್ಟೇಡಿಯಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

"ನಾನು ಗೆಲ್ಲಲು, ಆಟವಾಡಲು, ಆನಂದಿಸಲು, ದೇಶ ಹಾಗೂ ದೇಶದ ಸಂಸ್ಕೃತಿಯ ಯಶಸ್ಸಿನ ಭಾಗವಾಗಲು ಇಲ್ಲಿಗೆ ಬರುತ್ತಿದ್ದೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: 'ನಟನೆಗೆ ನಿವೃತ್ತಿ ತೆಗೆದುಕೊಳ್ಳಿ' ಎಂದ ನೆಟ್ಟಿಗನಿಗೆ ಶಾರುಖ್ ನೀಡಿದ ಉತ್ತರವೇನು?

Similar News