ಬ್ರೆಝಿಲ್‌ನ ಮಾಜಿ ಅಧ್ಯಕ್ಷರ ಬೆಂಬಲಿಗರಿಂದ ಅಧ್ಯಕ್ಷರ ಅರಮನೆ, ಕಾಂಗ್ರೆಸ್, ಸುಪ್ರೀಂ ಕೋರ್ಟ್ ಮೇಲೆ ದಾಳಿ

Update: 2023-01-09 03:11 GMT

ಬ್ರೆಸಿಲಿಯಾ: ಎರಡು ವರ್ಷ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಕಾಂಗ್ರೆಸ್ ಮೇಲೆ ನಡೆಸಿದ ದಾಳಿಯ ರೂಪದಲ್ಲೇ ಬ್ರೆಝಿಲ್‌ನ ಬಲಪಂಥೀಯ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬೆಂಬಲಿಗರು ಭಾನುವಾರ ದೇಶದ ಸಂಸತ್ತು, ಅಧ್ಯಕ್ಷರ ಅರಮನೆ ಮತ್ತು ಸುಪ್ರೀಂಕೋರ್ಟ್ ಮೇಲೆ ದಾಳಿ ನಡೆಸಿದರು.

ಕಳೆದ ವರ್ಷ ಬ್ರೆಝಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೋಲ್ಸನಾರೊ ಅವರ ವಿರುದ್ಧ ಜಯ ಸಾಧಿಸಿದ್ದ ಎಡಪಂಥೀಯ ಮುಖಂಡ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಜನವರಿ 31ವರೆಗೂ ಬ್ರಸಿಲಿಯಾದಲ್ಲಿ ಒಕ್ಕೂಟ ಭದ್ರತಾ ಹಸ್ತಕ್ಷೇಪ ಘೋಷಿಸಿದ್ದಾರೆ. ಇದೀಗ ನಡೆದಿರುವ ದಾಳಿಗೆ ಬೋಲ್ಸನಾರೊ ನೇರ ಹೊಣೆ ಎಂದು ಅವರು ದೂರಿದ್ದು, ರಾಜಧಾನಿಯ ಭದ್ರತಾ ವ್ಯವಸ್ಥೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಫ್ಯಾಸಿಸ್ಟ್ ಮತ್ತು ಮತಾಂಧರ ಕೃತ್ಯ ಎಂದು ದಾಳಿಯನ್ನು ಖಂಡಿಸಿದ್ದಾರೆ.

ಎಲ್ಲ ಗಲಭೆಕೋರರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಲುಲಾ, ಈ ಚಳವಳಿಗೆ ಹಣಕಾಸು ನೆರವು ನೀಡುತ್ತಿರುವವರನ್ನು ಮಟ್ಟಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲುಲಾ ಸದ್ಯಕ್ಕೆ ರಾಜಧಾನಿಯಿಂದ ಹೊರಗಿದ್ದು, ಸಾವೊ ಪೊಲೋ ರಾಜ್ಯಕ್ಕೆ ಅಧಿಕೃತ ಪ್ರವಾಸದ ಮೇಲೆ ತೆರಳಿದ್ದಾರೆ.

ಹಳದಿ ಮತ್ತು ಹಸಿರು ವಸ್ತ್ರ ಧರಿಸಿದ್ದ ಸಾವಿರಾರು ಮಂದಿ ಪ್ರತಿಭಟನಾಕಾರರು ಅಕ್ಟೋಬರ್ 30ರ ಚುನಾವಣೆ ಬಳಿಕ ಹಲವು ತಿಂಗಳಿಂದ ಉದ್ವಿಗ್ನತೆ ಸೃಷ್ಟಿಸಿದ್ದು, ರಾಜಧಾನಿಯಲ್ಲಿ ಭಾನುವಾರ ದಾಂಧಲೆ ನಡೆಸಿದರು. ಟ್ರಂಪ್ ಮಾದರಿಯಲ್ಲಿ ಚುನಾವಣೆ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಬೋಲ್ಸನಾರೊ, ಬ್ರೆಝಿಲ್‌ನ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಯಲ್ಲಿ ವಂಚಿಸಲಾಗಿದೆ ಎಂದು ಆಪಾದಿಸಿ ಹಿಂಸಾತ್ಮಕ ಚಳವಳಿ ಕೈಗೊಂಡಿದ್ದಾರೆ.

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಡೆದ ಈ ದಾಳಿ ಘಟನೆಯಿಂದ ಲುಲಾ ಅವರಿಗೆ ದೊಡ್ಡ ತೊಡಕು ಉಂಟಾಗಿದೆ. ಬೋಲ್ಸನಾರೊ ಅವರ ರಾಷ್ಟ್ರೀಯವಾದಿ ಜನಪ್ರಿಯತೆಯಿಂದ ಹಾಳಾಗಿರುವ ದೇಶವನ್ನು ಒಗ್ಗೂಡಿಸುವುದಾಗಿ ಅವರು ಭರವಸೆ ನೀಡಿದ್ದರು.

Similar News