ಇಸ್ರೇಲ್ ಸರಕಾರದ ವಿರುದ್ಧ ಸೇನಾ ಮುಖ್ಯಸ್ಥರ ವಾಗ್ದಾಳಿ

Update: 2023-01-13 18:48 GMT

ಜೆರುಸಲೇಂ, ಜ.13: ಇಸ್ರೇಲ್ನಲ್ಲಿ ವಸಾಹತುಗಾರರ ಪರವಿರುವ ಸಂಸದರಿಗೆ ಹೆಚ್ಚಿನ ಅಧಿಕಾರ, ನಿಯಂತ್ರಣ ನೀಡುವ ಮತ್ತು ಇಸ್ರೇಲ್ನ ಭದ್ರತಾ ವ್ಯವಸ್ಥೆಯಲ್ಲಿ ಕೆಲವು ಪ್ರಸ್ತಾವಿತ ಬದಲಾವಣೆಗೆ ಬೆಂಜಮಿನ್ ನೆತನ್ಯಾಹು ಸರಕಾರ ಉದ್ದೇಶಿಸಿರುವುದರ ವಿರುದ್ಧ ನಿರ್ಗಮನ ಸೇನಾ ಮುಖ್ಯಸ್ಥರು ಶುಕ್ರವಾರ ಎಚ್ಚರಿಸಿದ್ದಾರೆ.

ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲಿ ಆಡಳಿತವನ್ನು ಭದ್ರಪಡಿಸಲು, ರಕ್ಷಣಾ ಸಚಿವಾಲಯವನ್ನು ಪುನರ್ರಚಿಸಲು ಮತ್ತು ವಿಶೇಷ ಅರೆಸೈನಿಕ ಪೊಲೀಸ್ ಘಟಕವನ್ನು ನಿಯಂತ್ರಿಸಲು ಪ್ರಯತ್ನಿಸುವ ಯಹೂದಿ ವಸಾಹತುಗಾರ ಕಾರ್ಯಕರ್ತರೊಂದಿಗೆ ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರಕಾರದ ಒಪ್ಪಂದಗಳನ್ನು ಸೇನಾ ಮುಖ್ಯಸ್ಥ ಲೆ. ಜ. ಅವೀವ್ ಕೊಚಾವಿ ಟೀಕಿಸಿದ್ದು ಇದು ಹಾನಿಯುಂಟು ಮಾಡುವ ಸಾಧ್ಯತೆಯಿದೆ ಮತ್ತು ಯುದ್ಧಕ್ಕೆ ನಮ್ಮ ಸನ್ನದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇಸ್ರೇಲ್ನ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಸಮ್ಮಿಶ್ರ ಸರಕಾರದ ನಡೆಯಿಂದ ಸೇನೆಯ ಅಧಿಕಾರ ಕ್ಷೀಣಿಸುತ್ತಿದೆ ಎಂದಿದ್ದಾರೆ. ಸುಮಾರು 4 ವರ್ಷ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಲೆಫ್ಟಿನೆಂಟ್ ಜನರಲ್ ಅವೀವ್ ಕೊಚಾವಿ ಮುಂದಿನ ವಾರ ಅಧಿಕಾರವನ್ನು ಮೇಜರ್ ಜನರಲ್ ಹೆರ್ಝಿ ಹಲೇವಿಗೆ ಹಸ್ತಾಂತರಿಸಲಿದ್ದಾರೆ. ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರಕಾರದ ಒಪ್ಪಂದ ಮತ್ತು ಯೋಜನೆಗಳಿಗೆ ಇಸ್ರೇಲ್ ಸಮಾಜದ ವಿವಿಧ ಭಾಗಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ, ಸೇನಾ ಮುಖ್ಯಸ್ಥ ಅವೀವ್ ಕೊಚಾವಿ ವ್ಯಕ್ತಪಡಿಸಿರುವ ಅಸಮಾಧಾನ ಹೆಚ್ಚಿನ ಮಹತ್ವ ಪಡೆದಿದೆ. ಯೆಹೂದಿ ಇಸ್ರೇಲಿಯನ್ನರಲ್ಲಿ ಮಿಲಿಟರಿಯನ್ನು ಸ್ಥಿರತೆಯ ಲಾಂಛನವೆಂದು ಪರಿಗಣಿಸಲಾಗಿದೆ ಮತ್ತು ಇದು ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಗಳಲ್ಲಿ ಒಂದಾಗಿದೆ.

ಆಕ್ರಮಿತ ಪಶ್ಚಿಮದಂಡೆಯಲ್ಲಿ ಮೂರು ಪ್ರತ್ಯೇಕ ಪ್ರಾಧಿಕಾರ ಮೂಲಗಳನ್ನು ರೂಪಿಸುವ ಸಮ್ಮಿಶ್ರ ಸರಕಾರದ ಯೋಜನೆಯನ್ನು ಕೊಚಾವಿ ತೀವ್ರವಾಗಿ ವಿರೋಧಿಸಿದ್ದಾರೆ. ಸರಕಾರದಲ್ಲಿ ವಿತ್ತಸಚಿವರಾಗಿರುವ ಪ್ರಭಾವೀ ಬಲಪಂಥೀಯ ಮುಖಂಡ ಬೆಝಲೆಲ್ ಸ್ಮೊಟ್ರಿಚ್ಗೆ, ಇಸ್ರೇಲ್ನ ನಿಯಂತ್ರಣದಲ್ಲಿರುವ ಪಶ್ಚಿಮದಂಡೆಯ ಪ್ರದೇಶದಲ್ಲಿ ಇಸ್ರೇಲಿಯನ್ನರ ವಸಾಹತು ಮತ್ತು ಫೆಲೆಸ್ತೀನೀಯರ ನಿರ್ಮಾಣ ಯೋಜನೆಯನ್ನು ನಿಯಂತ್ರಿಸುವ ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನೀಯರು ಬಯಸುತ್ತಿರುವ ಸ್ವತಂತ್ರ ದೇಶದ ಪ್ರದೇಶವನ್ನು ಸಂಪೂರ್ಣವಾಗಿ ಇಸ್ರೇಲ್ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಸ್ಮೊಟ್ರಿಚ್ ಪ್ರತಿಪಾದಿಸುತ್ತಿದ್ದಾರೆ.

ಪಶ್ಚಿಮ ದಂಡೆಗೆ ಸಂಬಂಧಿಸಿದಂತೆ ಎರಡು ಕಮಾಂಡಿಂಗ್ ಪ್ರಾಧಿಕಾರ ಇರಲು ಸಾಧ್ಯವಿಲ್ಲ. ನಮ್ಮಲ್ಲಿಯೇ ಪ್ರತ್ಯೇಕತೆಯು ಸರಿಯಲ್ಲ ಮತ್ತು ಮತ್ತು ಹಾನಿಯನ್ನು ಉಂಟು ಮಾಡಲಿದೆ. ಮತ್ತೊಬ್ಬ ಕಟ್ಟ ಬಲಪಂಥೀಯ ಸಂಸದ ಇತಮರ್ ಬೆನ್-ಗ್ವಿರ್ಗೆ ರಾಷ್ಟ್ರೀಯ ಭದ್ರತಾ ಸಚಿವ ಹುದ್ದೆ ನೀಡುವ ಜೊತೆಗೆ, ಇಸ್ರೇಲ್ನ ಅರೆಸೇನಾ ಗಡಿಪೊಲೀಸ್ ಘಟಕದ ಉಸ್ತುವಾರಿ ವಹಿಸಲಾಗಿದೆ. ಈ ಘಟಕ ಇದುವರೆಗೆ ಇಸ್ರೇಲ್ ಸೇನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನೆತನ್ಯಾಹು ಸರಕಾರದ ಈ ಕ್ರಮ ಪಶ್ಚಿಮ ದಂಡೆಯಲ್ಲಿ ಸೇನೆಯ ಅಧಿಕಾರವನ್ನು ಸೀಮಿತಗೊಳಿಸಿದೆ ಎಂದು ಲೆ. ಜ. ಅವೀವ್ ಕೊಚಾವಿ ವಾಗ್ದಾಳಿ ನಡೆಸಿದ್ದಾರೆ.

ಸೇನೆಯ ಅಧಿಕಾರದ ಸರಪಳಿಯನ್ನು ಉಳಿಸಿಕೊಳ್ಳಬೇಕು. ಸಮ್ಮಿಶ್ರ ಸರಕಾರದ ನಡೆಗಳು ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ. ಈ ವಿಷಯವನ್ನು ನೆತನ್ಯಾಹು ಅವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟಪಡಿಸಿದ್ದೇನೆ ಎಂದು ಎಂದು ಲೆ. ಜ. ಅವೀವ್ ಕೊಚಾವಿ ಹೇಳಿರುವುದಾಗಿ ವರದಿಯಾಗಿದೆ.

Similar News