​ಲಂಡನ್‍ನಿಂದ ನೀರವ್ ಮೋದಿ ಗಡೀಪಾರಿಗೆ 'ಕಾನೂನು ತೊಡಕು'

Update: 2023-01-14 02:00 GMT

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ವಂಚನೆ ನಡೆಸಿದ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಕಾನೂನು ತೊಡಕು ಎದುರಾಗಿದೆ. ಬ್ರಿಟನ್‍ನಲ್ಲಿ ಈ ಉದ್ಯಮಿ ಎಲ್ಲ ಕಾನೂನು ಸಮರವನ್ನು ಸೋತರೂ, ತಕ್ಷಣಕ್ಕೆ ಅವರ ಗಡೀಪಾರು ಸಾಧ್ಯವಾಗುತ್ತಿಲ್ಲ.

ಗಡೀಪಾರು ಪ್ರಕ್ರಿಯೆ ವಿರುದ್ಧ ನೀರವ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು 2022ರ ಡಿಸೆಂಬರ್ 15ರಂದು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬ್ರಿಟನ್ ಗಡೀಪಾರು ಪ್ರಕ್ರಿಯೆ ಅನ್ವಯ ತೀರ್ಪು ಬಂದ 28 ದಿನಗಳ ಒಳಗಾಗಿ ಗಡೀಪಾರು ಮಾಡಬೇಕಾಗುತ್ತದೆ ಎಂದು ಅಂದಿನ ಗೃಹ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದರು. 28 ದಿನಗಳ ಈ ಗಡುವು ಮುಗಿದರೂ, ನೀರವ್ ಭಾರತದ ವಿಮಾನ ಹತ್ತದೇ ಬ್ರಿಟಿಷ್ ಜೈಲಿನಲ್ಲೇ ಉಳಿದಿದ್ದಾರೆ ಹಾಗೂ ಜಾಮೀನು ಅರ್ಜಿಯನ್ನೂ ಸಲ್ಲಿಸಿಲ್ಲ.

ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸಸ್ ವಕ್ತಾರ ಶುಕ್ರವಾರ ಈ ಸಂಬಂಧ ಹೇಳಿಕೆ ನೀಡಿ, ನೀರವ್ ಮೋದಿ ಗಡೀಪಾರು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕಾನೂನು ತೊಡಕಿನಿಂದಾಗಿ ತಕ್ಷಣಕ್ಕೆ ಗಡೀಪಾರು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಎಸೆಕ್ಸ್ ಚೇಂಬರ್ಸ್‍ನ ಬ್ಯಾರಿಸ್ಟರ್ ಕರಿಷ್ಮಾ ವೋರಾ ಅವರ ಪ್ರಕಾರ, "ನೀರವ್ ರಾಜಾಶ್ರಯಕ್ಕೆ ಮನವಿ ಮಾಡಿರುವ ಸಾಧ್ಯತೆ ಇದೆ. ಗಡೀಪಾರಿಗೆ ಇತರ ಯಾವುದೇ ಕಾನೂನು ತೊಡಕು ಇದೆ ಎನಿಸುವುದಿಲ್ಲ. ನೀರವ್ ಅರ್ಜಿ ಪ್ರಕ್ರಿಯೆ ನಿಧಾನವಾಗಿ ಎಲ್ಲ ಮನವಿ ಹಂತಗಳನ್ನು ದಾಟಬೇಕು ಅಥವಾ ಅವು ಮುಗಿದಿರಬೇಕು. ಅಂತಿಮವಾಗಿ ಆಶ್ರಯ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಇರಬಹುದು. 

ಆ ನಿರ್ಧಾರ ಕೈಗೊಂಡರೆ ಗಡೀಪಾರು ಮಾಡಬಹುದು. ಒಂದು ವೇಳೆ ಆಶ್ರಯ ನೀಡಲು ಒಪ್ಪಿಕೊಂಡರೆ, ಬ್ರಿಟನ್‍ನಲ್ಲೇ ಉಳಿಯಲು ಅವರಿಗೆ ಅವಕಾಶ ನೀಡಬಹುದು. ಆದರೆ ಆ ಸಾಧ್ಯತೆ ಇಲ್ಲ"ಮಾನವ ಹಕ್ಕುಗಳಿಗಾಗಿ ಇರುವ ಯುರೋಪಿಯನ್ ಕೋರ್ಟ್‍ನ ವಕ್ತಾರರು ಹೇಳುವಂತೆ, ನೀರವ್ ಮೋದಿ ಗಡೀಪಾರು ಪ್ರಕ್ರಿಯೆ ತಡೆಯಲು ನಿಯಮ 39ರ ಅನ್ವಯ ಅರ್ಜಿ ಸಲ್ಲಿಸಿಲ್ಲ.

ಆದಾಗ್ಯೂ 6498 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯ ಗಡೀಪಾರು ವಿಳಂಬವಾಗುತ್ತಿದೆ.

Similar News