ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡು ಹೊಸ ಕೆಲಸ ಗಿಟ್ಟಿಸಲು ಪರದಾಡುತ್ತಿರುವ ಸಾವಿರಾರು ಭಾರತೀಯ ಟೆಕ್ಕಿಗಳು: ವರದಿ

Update: 2023-01-23 13:29 GMT

ವಾಷಿಂಗ್ಟನ್:‌ ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್‌ (Google), ಮೈಕ್ರೋಸಾಫ್ಟ್‌ (Microsoft), ಫೇಸ್ಬುಕ್(Facebook) ಮತ್ತು ಅಮೆಝಾನ್‌(Amazon) ಕಂಪೆನಿಗಳ ಲೇಆಫ್‌ನಿಂದಾಗಿ (Layoffs) ಉದ್ಯೋಗ ಕಳೆದುಕೊಂಡ ಸಾವಿರಾರು ಭಾರತೀಯ ಐಟಿ ವೃತ್ತಿಪರರು ತಮ್ಮ ವರ್ಕ್‌ ವೀಸಾದ ನಿಯಮಗಳಂತೆ ಅಲ್ಲಿಯೇ ಉಳಿದುಕೊಳ್ಳಲು ನಿಗದಿತ ಅವಧಿಯಲ್ಲಿ ಹೊಸ ಉದ್ಯೋಗ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ವರದಿಗಳ ಪ್ರಕಾರ ಸುಮಾರು 2 ಲಕ್ಷ ಐಟಿ ವೃತ್ತಿಪರರು‌ ಕಳೆದ ನವೆಂಬರ್‌ ತಿಂಗಳಿಂದೀಚೆಗೆ ಉದ್ಯೋಗ ಕಳೆದುಕೊಂಡಿದ್ದರೆ ಅವರಲ್ಲಿ ಶೇ. 30 ರಿಂದ ಶೇ. 40 ರಷ್ಟು ಮಂದಿ ಭಾರತೀಯರೆಂದು ತಿಳಿದು ಬಂದಿದೆ. ಇವರಲ್ಲಿ ಹೆಚ್ಚಿನವರು ಎಚ್-1ಬಿ ಹಾಗೂ ಎಲ್‌1 ವೀಸಾ ಪಡೆದವರಾಗಿದ್ದಾರೆ.

ಎಚ್‌-1ಬಿ ವೀಸಾ ಹೊಂದಿದವರು ಉದ್ಯೋಗ ಕಳೆದುಕೊಂಡಿದ್ದರೆ ನಿಯಮ ಪ್ರಕಾರ ಅವರು 60 ದಿನಗಳೊಳಗೆ ಹೊಸ ಉದ್ಯೋಗ ಕಂಡುಕೊಳ್ಳಬೇಕು ಅಥವಾ ಈ ಅವಧಿಯಲ್ಲಿ ಉದ್ಯೋಗ ದೊರೆಯದೇ ಇದ್ದರೆ ಹತ್ತು ದಿನಗಳೊಳಗೆ ದೇಶ ತೊರೆಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಐಟಿ ಕಂಪೆನಿಗಳು ಲೇಆಫ್‌ ನಡೆಸುತ್ತಿರುವುದರಿಂದ ಅವರಿಗೆ ಹೊಸ ಉದ್ಯೋಗ ಪಡೆಯುವುದು ಹರಸಾಹಸದ ಕೆಲಸವಾಗಿ ಬಿಟ್ಟಿದೆ.

ಹಲವು ಐಟಿ ವೃತ್ತಿಪರರ ಮಕ್ಕಳು ಅಮೆರಿಕಾದಲ್ಲಿಯೇ ವಿದ್ಯಾಭ್ಯಾಸ ಕೂಡ ಪಡೆಯುತ್ತಿರುವುದರಿಂದ ಒಮ್ಮೆಗೆ ಆ ದೇಶ ತೊರೆದು ಭಾರತಕ್ಕೆ ವಾಪಸಾಗುವುದು ಕೂಡ ಕಷ್ಟವಾಗುತ್ತಿದೆ.

ಈ ರೀತಿ ಲೇಆಫ್‌ನಿಂದ ಬಾಧಿತರಾದ ಐಟಿ ವೃತ್ತಿಪರರಿಗೆ ಸಹಾಯ ಮಾಡಲು ಗ್ಲೋಬಲ್‌ ಇಂಡಿಯನ್‌ ಟೆಕ್ನಾಲಜಿ ಪ್ರೊಫೆಶನಲ್ಸ್‌ ಅಸೋಸಿಯೇಶನ್‌ ಮತ್ತು ಫೌಂಡೇಶನ್‌ ಫಾರ್‌ ಇಂಡಿಯಾ ಎಂಡ್‌ ಇಂಡಿಯನ್‌ ಡಯಾಸ್ಪೊರ ಸ್ಟಡೀಸ್‌  ಮುಂದೆ ಬಂದಿವೆ ಹಾಗೂ ಉದ್ಯೋಗ ಹುಡುಕುವವರಿಗೆ ಉದ್ಯೋಗ ಒದಗಿಸುವ ಸಂಸ್ಥೆಗಳ ಜೊತೆಗೆ ಹಾಗೂ ಇತರ ಸಹಾಯ ಹಸ್ತ ಚಾಚಬಹುದಾದ ಮಂದಿಯೊಂದಿಗೆ ಸಂಪರ್ಕ ಕಲ್ಪಿಸುತ್ತಿದೆ.

ಉದ್ಯೋಗ ಕಳೆದುಕೊಂಡ ಭಾರತೀಯ ಐಟಿ ವೃತ್ತಿಪರರು ವಾಟ್ಸ್ಯಾಪ್‌ ಗ್ರೂಪ್‌ಗಳನ್ನು ರಚಿಸಿ ಈ ಸಮಸ್ಯೆಯಿಂದ ಹೊರಬರುವ ವಿಧಾನಗಳನ್ನು ಅವಲೋಕಿಸುತ್ತಿದ್ದಾರೆ. ಇಂತಹ ಒಂದು ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ 800 ಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡ ಭಾರತೀಯ ವೃತ್ತಿಪರರಿದ್ದಾರೆ ಹಾಗೂ ಲಭ್ಯ ಉದ್ಯೋಗಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಐಟಿ ವೃತ್ತಿಪರರಿಗೆ ಇನ್ನೊಂದು ಹೊಡೆತವನ್ನು ಗೂಗಲ್‌ ನೀಡಿದ್ದು ತನ್ನ ಗ್ರೀನ್‌ ಕಾರ್ಡ್‌ ಪ್ರಕ್ರಿಯೆಗೊಳಿಸುವಿಕೆಯನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿದೆ. ಈಗಾಗಲೇ ಸಾವಿರಾರು ಮಂದಿಯನ್ನು ಉದ್ಯೋಗದಿಂದ ಕೈಬಿಟ್ಟಿರುವ ಗೂಗಲ್‌  ತನಗೆ ವಿದೇಶಿ ಐಟಿ ವೃತ್ತಿಪರ ಇಲ್ಲಿಯ ಖಾಯಂ ನಿವಾಸಿಯಾಗಬೇಕೆಂದು ಯುಎಸ್‌ಸಿಐಎಸ್‌ ಮುಂದೆ ಹೇಳುವುದು ಸಾಧ್ಯವಾಗದು. ಇತರ ಕಂಪೆನಿಗಳೂ ಇದೇ ನೀತಿ ಅನುಸರಿಸಬಹುದೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಆಕ್ಷೇಪಾರ್ಹ ಭಾಷಣ ಮಾಡಿದ್ದ ಉತ್ತರ ಪ್ರದೇಶ ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಅರ್ಜಿ ವಜಾ

Similar News