ಉಕ್ರೇನ್‌ನಲ್ಲಿ ರಶ್ಯದ 1,80,000 ಯೋಧರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ: ವರದಿ

Update: 2023-01-23 17:51 GMT

ಓಸ್ಲೊ, ಜ.23: ಉಕ್ರೇನ್‌ನಲ್ಲಿನ ಯುದ್ಧದಲ್ಲಿ ಇದುವರೆಗೆ ರಶ್ಯದ 1,80,000 ಯೋಧರು ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಇದೇ ವೇಳೆ ಉಕ್ರೇನ್ನಲ್ಲಿ 1,00,000 ಯೋಧರ ಸಾವು-ನೋವು ಸಂಭವಿಸಿದೆ ಮತ್ತು 30,000 ನಾಗರಿಕರು ಮೃತಪಟ್ಟಿದ್ದಾರೆ ಎಂದು ನಾರ್ವೆ ಸೇನಾ ಮುಖ್ಯಸ್ಥರ ವರದಿ ಹೇಳಿದೆ.

ರಶ್ಯದ ನೆರೆರಾಷ್ಟ್ರವಾಗಿರುವ ನಾರ್ವೆ 1949ರಿಂದಲೂ ನೇಟೊ ಸದಸ್ಯನಾಗಿದೆ. ಈ ಭಾರೀ ನಷ್ಟದ ಹೊರತಾಗಿಯೂ ರಶ್ಯವು ಈ ಯುದ್ಧವನ್ನು ಇನ್ನಷ್ಟು ಅವಧಿಗೆ ಮುಂದುವರಿಸುವ ಸಾಮರ್ಥ್ಯ ಹೊಂದಿದೆ ಎಂದು ನಾರ್ವೆ ಸೇನಾ ಮುಖ್ಯಸ್ಥ ಎರಿಕ್ ಕ್ರಿಸ್ಟೋಫರ್ಸನ್ ಹೇಳಿದ್ದಾರೆ. ಉಕ್ರೇನ್ನ ವೈಮಾನಿಕ ದಾಳಿ ವಿರೋಧಿ ವ್ಯವಸ್ಥೆಯ ಕಾರಣ ಉಕ್ರೇನಿಯನ್ನರು ಇದುವರೆಗೆ ರಶ್ಯದ ವಾಯುಪಡೆಯನ್ನು ಯುದ್ಧದಿಂದ ಹೊರಗಿಡಲು ಯಶಸ್ವಿಯಾಗಿದ್ದಾರೆ. ಆದರೆ ಇದನ್ನು ಎಷ್ಟು ಸಮಯದವರೆಗೆ ಮುಂದುವರಿಸುವ ಸಾಮರ್ಥ್ಯವಿದೆ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ . ಇತ್ತೀಚಿನ ದಿನಗಳಲ್ಲಿ ರಶ್ಯ ನಡೆಸುವ ಬಹುತೇಕ ದಾಳಿಗಳು ದೀರ್ಘ ಶ್ರೇಣಿಯ ಕ್ಷಿಪಣಿಯ ಮೂಲಕವಾಗಿದೆ. ಚಳಿಗಾಲದಲ್ಲಿ ಉಕ್ರೇನ್ನ ಯುದ್ಧಸಾಮರ್ಥ್ಯ ಉಳಿಸಿಕೊಳ್ಳಲು ಅವರಿಗೆ ಕ್ಷಿಪ್ರವಾಗಿ ಯುದ್ಧಟ್ಯಾಂಕ್ಗಳನ್ನು ಒದಗಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಉಕ್ರೇನ್ ಮತ್ತು ಯುರೋಪಿಯನ್ ಯೂನಿಯನ್ನ ಹಲವು ದೇಶಗಳ ವಿನಂತಿಯ ಹೊರತಾಗಿಯೂ, ಉಕ್ರೇನ್ಗೆ ಲಿಯೊಪಾರ್ಡ್ ಯುದ್ಧಟ್ಯಾಂಕ್ ಪೂರೈಕೆಯ ಪ್ರಸ್ತಾವವನ್ನು ಜರ್ಮನಿ ತಡೆಹಿಡಿದಿದೆ. ಅತ್ಯಾಧುನಿಕ ಲಿಯೊಪಾರ್ಡ್ ಯುದ್ಧಟ್ಯಾಂಕ್ ಹಲವು ಯುರೋಪಿಯನ್ ಯೂನಿಯನ್ ದೇಶಗಳ ಬಳಿಯಿದೆ. ಆದರೆ ಇದನ್ನು ಉಕ್ರೇನ್ಗೆ ಒದಗಿಸಲು ಜರ್ಮನಿಯ ಅನುಮತಿ ಅಗತ್ಯವಿದೆ. ಯುದ್ಧದಲ್ಲಿ ಯೋಧರ ಸಾವು-ನೋವಿನ ಮಾಹಿತಿಯನ್ನು ಕೆಲ ತಿಂಗಳಿಂದ ರಶ್ಯ ಅಥವಾ ಉಕ್ರೇನ್ ಒದಗಿಸಿಲ್ಲ.

ಉಕ್ರೇನ್ ಗೆ ಹೊಸ ಶಸ್ತ್ರಾಸ್ತ್ರ ಒದಗಿಸಿದರೆ ಜಾಗತಿಕ ದುರಂತ: ಪಾಶ್ಚಿಮಾತ್ಯರಿಗೆ ರಶ್ಯ ಎಚ್ಚರಿಕೆ 

ರಶ್ಯದ ಪ್ರದೇಶಗಳಿಗೆ ಬೆದರಿಕೆಯಾಗಿರುವ ಹೊಸ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ಒದಗಿಸಿದರೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಬಳಕೆಯ ವಿರುದ್ಧದ ನೀತಿಯನ್ನು ಇದು ಸಮರ್ಥಿಸುವುದಿಲ್ಲ ಎಂದು ರಶ್ಯ ಸಂಸತ್ತಿನ ಕೆಳಮನೆ ‘ಡೂಮಾ’ದ ಸ್ಪೀಕರ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಪ್ತ ವಿಚೆಸ್ಲಾವ್ ವೊಲೊದಿನ್ ಎಚ್ಚರಿಸಿದ್ದಾರೆ.

ಉಕ್ರೇನ್ ಗೆ ಅಮೆರಿಕ ಮತ್ತು ನೇಟೊದ ನೆರವು ಜಗತನ್ನು ಭಯಾನಕ ಯುದ್ಧದತ್ತ ಮುನ್ನಡೆಸುತ್ತಿದೆ. ಅಮೆರಿಕ ಮತ್ತು ನೇಟೊ ದೇಶಗಳು ಒದಗಿಸುವ ಆಯುಧಗಳು ನಾಗರಿಕ ಪ್ರದೇಶದ ಮೇಲೆ ದಾಳಿಗೆ ಮತ್ತು ನಮ್ಮ ಪ್ರದೇಶವನ್ನು ವಶಪಡಿಸುವ ಪ್ರಯತ್ನಕ್ಕೆ ಬಳಕೆಯಾದರೆ( ಅವರು ಈಗಾಗಲೇ ಈ ಬೆದರಿಕೆ ಒಡ್ಡಿದ್ದಾರೆ), ಅತ್ಯಂತ ಮಾರಕ, ಶಕ್ತಿಶಾಲಿ ಆಯುಧಗಳ ಮೂಲಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ವೊಲೊದಿನ್ ಹೇಳಿದ್ದಾರೆ. ಪರಮಾಣು ಶಕ್ತಿಗಳು ಈ ಹಿಂದೆ ಸ್ಥಳೀಯ ಘರ್ಷಣೆಗಳಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಬಳಸಿಲ್ಲ ಎಂಬ ವಾದಗಳು ಸಮರ್ಥನೀಯವಲ್ಲ. ಯಾಕೆಂದರೆ ಈ ದೇಶಗಳು ತಮ್ಮ ನಾಗರಿಕರ ಭದ್ರತೆಗೆ ಮತ್ತು ದೇಶದ ಪ್ರಾದೇಶಿಕ ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.
 
ಉಕ್ರೇನ್ಗೆ ಕೋಟ್ಯಾಂತರ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒದಗಿಸುವುದಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಕಳೆದ ವಾರ ಭರವಸೆ ನೀಡಿವೆ.

Similar News